ಚಂಡೀಗಢ, ಆ. 04 (DaijiworldNews/AA): ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರನ್ನು ಶಾಲೆಯ ಆವರಣದಲ್ಲೇ ಮುಸುಕುಧಾರಿ ಯುವಕನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಘಟನೆ ನಡೆದ ಕೇವಲ ಎರಡು ಗಂಟೆಗಳ ಒಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂಧ್ಯಾ(29) ಮೃತ ಶಿಕ್ಷಕಿ. ಅಮಿತ್(21) ಕೊಲೆಗೈದ ಆರೋಪಿ.
ಬೆಳಗ್ಗೆ ಶಾಲೆಗೆ ಬಂದಿದ್ದ ಮುಸುಕು ಧರಿಸಿದ್ದ ಆರೋಪಿಯು, ಶಿಕ್ಷಕಿಯೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಗೇಟ್ ಬಳಿ ಕಾಯುತ್ತಿದ್ದ. ಬಳಿಕ ಸಂಧ್ಯಾ ಹೊರಗೆ ಬಂದ ಕೂಡಲೇ ಆಕೆಯ ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕೇವಲ 30 ಸೆಕೆಂಡುಗಳಲ್ಲಿ ಆಕೆಯ ಕುತ್ತಿಗೆ, ಮುಖ, ಎದೆ ಹಾಗೂ ಹೊಟ್ಟೆಗೆ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಶಿಕ್ಷಕಿಯ ಕಿರುಚಾಟ ಕೇಳಿ ಓಡಿ ಬಂದ ಶಾಲೆಯ ಆಡಳಿತಾಧಿಕಾರಿ ತಡೆಯಲು ಯತ್ನಿಸಿದ್ದಾರೆ. ಆದರೆ ಆರೋಪಿಯು ಅವರ ಮೇಲೂ ಚಾಕು ತೋರಿಸಿ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರು ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಅಮಿತ್ ಶಿಕ್ಷಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಸಂಧ್ಯಾ ಎಚ್ಚರಿಕೆ ನೀಡಿದ ಹೊರತಾಗಿಯೂ ಆತ ಕಿರುಕುಳ ಮುಂದುವರಿಸಿದ್ದ. ಕೆಲ ದಿನಗಳ ಹಿಂದೆ ಸಂಧ್ಯಾ ಆತನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಅದೇ ಸೇಡಿನಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.