ತುಮಕೂರು, ಆ. 04 (DaijiworldNews/AK): ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಅದಕ್ಕಾಗಿ ತಕ್ಷಣ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಜಿಲ್ಲೆಯ ವಿವಿಧ ಭಾಗದಲ್ಲಿನ ರೈತರ ಜಮೀನಿಗೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದು ಕೈ ಕಟ್ಟಿ ಕೂತರೆ ಸಾಲದು. ಇಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೂ ಇದೆ. ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ತೀವ್ರ ಬರದ ಸಂಕಷ್ಟದಲ್ಲಿವೆ. ಕೇಂದ್ರ ಸರ್ಕಾರ ಬರ ಪರಿಶೀಲನೆಗೆ ತಂಡ ಕಳುಹಿಸಲಿದೆ. ಆದರೆ ಅದಕ್ಕೂ ಮೊದಲು ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ರಾಜ್ಯ ಸರ್ಕಾರ ಮೊದಲು ಧಾವಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಅರಿಯಲು ಬಿಜೆಪಿ ಮುಂದಾಗಿದೆ. ಶಾಸಕರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಬರದ ನೈತ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಬರದಿಂದ ತೀವ್ರ ಸಂಕಷ್ಟ ಇದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕಾದ ಸ್ಥಿತಿ ಇದೆ. ಜಿಲ್ಲೆಯ 10 ತಾಲೂಕುಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ತೆಂಗು, ರಾಗಿ, ಹಣ್ಣು ಹಾಗೂ ತರಕಾರಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಕಡೆಗಳಲ್ಲಿ ಇನ್ನೂ ಬಿತ್ತನೆ ಆರಂಭವಾಗಿಲ್ಲ ಎಂದರು.
ರೈತರು ಎಷ್ಟು ಸಂಕಷ್ಟದಲ್ಲಿದ್ದಾರೆ ಎಂದರೆ ಫಸಲ್ ಭೀಮಾ ಯೋಜನೆಗೆ ಹಣ ಕಟ್ಟಲೂ ಅವರಿಂದ ಆಗ್ತ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಅದನ್ನು ಭರಿಸಬೇಕು. ಪ್ರತಿ ತಾಲೂಕಿಗೂ ಕನಿಷ್ಠ 50 ಲಕ್ಷ ಬಿಡುಗಡೆ ಮಾಡಿ ರೈತರ ವಿಮಾ ಪ್ರೀಮಿಯಂ ಪಾವತಿಗೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ಕುಡಿಯವ ನೀರಿಗೂ ರಾಜ್ಯದ ಹಲವು ಭಾಗದಲ್ಲಿ ಹಾಹಾಕಾರ ಆರಂಭವಾಗಿದೆ. ಮಳೆಗಾಲದಲ್ಲೇ ಇಂತಹ ಸ್ಥಿತಿ ಇದೆ. ಇನ್ನು ಮುಂದಿನ ದಿನಗಳಲ್ಲಿ ಇದು ಇನ್ನೂ ಉಲ್ಬಣವಾಗಬಹುದು.
ಕೆರೆ-ಕಟ್ಟೆಗಳು ಬತ್ತುತ್ತಿವೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಪ್ರತಿ ತಾಲೂಕಿಗೆ ಈಗಾಗಲೇ 1 ಕೋಟಿ ಅನುದಾನ ಘೋಷಿಸಲಾಗಿದೆ.