ಅಹಮದಾಬಾದ್, ಆ. 04 (DaijiworldNews/AK): ಸುಮಾರು ಮೂರೂವರೆ ತಿಂಗಳಿನಿಂದ ಕಾಣೆಯಾಗಿದ್ದ ಟೈಗರ್ ಹೆಸರಿನ ಲ್ಯಾಬ್ರಡಾರ್ ತಳಿಯ ಸಾಕು ನಾಯಿ ಅಚ್ಚರಿಯ ರೀತಿಯಲ್ಲಿ ಮನೆಗೆ ಮರಳಿದ್ದು, ಹರಕೆ ತೀರಿಸಲು ಮಾಲೀಕ ಹಾಗೂ ಸಿಬ್ಬಂದಿ ಪ್ರಸಿದ್ಧ ಅಂಬಾಜಿ ದೇವಸ್ಥಾನಕ್ಕೆ 60 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಪಾದಯಾತ್ರೆ ನಡೆಸಿದ ಘಟನೆಯೊಂದು ಗುಜರಾತ್ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ.

ಮೂರು ತಿಂಗಳ ಶೋಧ ಮತ್ತು ಹರಕೆ ಹೋಟೆಲ್ ಮಾಲೀಕರಾಗಿದ್ದ ಬನಸ್ಕಾಂತ ನಿವಾಸಿಯೊಬ್ಬರ ಪ್ರೀತಿಯ ನಾಯಿ ಟೈಗರ್ ಮೂರು ತಿಂಗಳ ಹಿಂದೆ ದಿಢೀರ್ ಕಣ್ಮರೆಯಾಗಿತ್ತು. ಮಾಲೀಕರು ಆ ಪ್ರದೇಶದಾದ್ಯಂತ ಹುಡುಕಾಟ ನಡೆಸಿದರೂ ನಾಯಿ ಪತ್ತೆಯಾಗಿರಲಿಲ್ಲ. ಕೊನೆಗೆ ಭರವಸೆ ಕಳೆದುಕೊಳ್ಳದ ಮಾಲೀಕರು, ಪ್ರಸಿದ್ಧ ಶ್ರೀ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನನ್ನ ಪ್ರೀತಿಯ ನಾಯಿ ಸುರಕ್ಷಿತವಾಗಿ ಮರಳಿ ಬಂದರೆ ಹೋಟೆಲ್ ಸಿಬ್ಬಂದಿಯೊಂದಿಗೆ 60 ಕಿ.ಮೀ ನಡೆದುಕೊಂಡು ಬಂದು ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದರು.
ಇತ್ತೀಚೆಗೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ರಿಕ್ಷಾವೊಂದರಲ್ಲಿದ್ದ ಟೈಗರ್, ತನ್ನ ಮಾಲೀಕರ ಧ್ವನಿಯನ್ನು ಗುರುತಿಸಿ ತಕ್ಷಣವೇ ಕೆಳಗಿಳಿದು ನೇರವಾಗಿ ಮಾಲೀಕರ ಬಳಿಗೆ ಓಡಿಬಂದಿದೆ. ತಿಂಗಳುಗಳ ನಂತರ ನಡೆದ ಈ ಅದ್ಭುತ ಮರುಮಿಲನ ಕುಟುಂಬಸ್ಥರಲ್ಲಿ ಸಂತಸ ತಂದಿದೆ.
ಕೊಟ್ಟ ಮಾತಿನಂತೆ ಹೋಟೆಲ್ ಮಾಲೀಕರು ತಮ್ಮ ಸಮಸ್ತ ಸಿಬ್ಬಂದಿ ಹಾಗೂ ಮರಳಿ ಬಂದ ನಾಯಿ ‘ಟೈಗರ್’ ಜೊತೆ ಅಂಬಾಜಿ ದೇವಸ್ಥಾನಕ್ಕೆ 60 ಕಿ.ಮೀ ಪಾದಯಾತ್ರೆ ಕೈಗೊಂಡರು. ದಾರಿಯುದ್ದಕ್ಕೂ ಸ್ಪೀಕರ್ಗಳಲ್ಲಿ ಭಕ್ತಿಗೀತೆಗಳನ್ನು ಹಾಕಿ, ನಾಯಿಯೊಂದಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಾ ಸಾಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ.