ಬೀದರ್, ಆ. 04 (DaijiworldNews/AA): ಸಂಪುಟ ವಿಸ್ತರಣೆಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್. ಆ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಯಾವುದೇ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾದಾಗ ಕೆಲ ಸಚಿವಾಕಾಂಕ್ಷಿಗಳಿಗೆ ಅವಕಾಶ ಸಿಗುವುದಿಲ್ಲ. ಆಗ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡುವುದು ಸಹಜ" ಎಂದರು.
"ಸಚಿವ ಸಂಪುಟದಲ್ಲಿ ಯಾವುದೇ ಹಿರಿಯ ನಾಯಕರನ್ನು ಕಡೆಗಣಿಸಿಲ್ಲ. ಹಿರಿಯರು ಹಾಗೂ ಕಿರಿಯರು ಎಲ್ಲರಿಗೂ ಅವಕಾಶ ನೀಡುವ ಪ್ರಯತ್ನ ಮಾಡಲಾಗುತ್ತದೆ. ಹೀಗಾಗಿ ಕೆಲವರನ್ನು ಕೈಬಿಡಬೇಕಾಗುತ್ತದೆ. ಅದರಿಂದ ಸಣ್ಣಪುಟ್ಟ ಅಸಮಾಧಾನ ಆಗುವುದು ಸಹಜ" ಎಂದು ತಿಳಿಸಿದರು.
"ಯಾವ ಸರ್ಕಾರಕ್ಕೂ ಶೇ.100ರಷ್ಟು ಪ್ರಾತಿನಿಧ್ಯ ನೀಡಲು ಸಾಧ್ಯವಿಲ್ಲ. ಕೆಲವರನ್ನು ಕೈಬಿಡಲೇಬೇಕಾಗುತ್ತದೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ" ಎಂದು ಹೇಳಿದರು.