ಚೆನ್ನೈ, ಆ. 04 (DaijiworldNews/AA): ಮುಖ್ಯಮಂತ್ರಿ ವಿಜಯ್ ನೇತೃತ್ವದ 'ತಮಿಳಾಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ ನೀಡಿದ ದೂರಿನನ್ವಯ ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧಪಕ್ಷದ ನಾಯಕರಾಗಿರುವ ಡಿಎಂಕೆ ಪಕ್ಷದ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ಪ್ರತಿಭಟನೆಯಲ್ಲಿ ಭಾಷಣ ಮಾಡುವ ವೇಳೆ ನಟಿ ತ್ರಿಷಾ ಕೃಷ್ಣನ್ ಅವರನ್ನು ಉಲ್ಲೇಖಿಸಿ ಉದಯನಿಧಿ ಸ್ಟಾಲಿನ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಹೇಳಿಕೆಯನ್ನು ಹಲವರು ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಮಾಡಿದ ದ್ವಂದ್ವಾರ್ಥದ ಮಾತು ಎಂದು ಆರೋಪಿಸಿದ್ದರು. ಈ ಕುರಿತು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು. ಪ್ರಕರಣ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಉದಯನಿಧಿ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಬಂಧನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ, "ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮುಖ್ಯಮಂತ್ರಿಯನ್ನು ಬಿಟ್ಟರೆ ಬೇರೆ ಯಾರ ಹೆಸರನ್ನೂ ಹೇಳಿಲ್ಲ. ಇದು ರಾಜಕೀಯ ಪ್ರತೀಕಾರದ ಕ್ರಮ. ಈ ವಿಚಾರದ ಅಂತಿಮ ತೀರ್ಪನ್ನು ನ್ಯಾಯಾಲಯವೇ ನೀಡಲಿದೆ" ಎಂದಿದ್ದಾರೆ.