ನವದೆಹಲಿ, ಆ. 02 (DaijiworldNews/AK): ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದ ಹಲವು ದಶಕಗಳ ಇತಿಹಾಸವಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಕರ್ನಾಟಕ ತಮಿಳುನಾಡಿಗೆ ನಮ್ಮ ಪಾಲಿನ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಇದರಿಂದಾಗಿ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಜುಲೈ 28ರಂದು ನಡೆದ ತನ್ನ 139ನೇ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಹವಾಮಾನ ಮತ್ತು ನೀರಿನ ಲಭ್ಯತೆಯನ್ನು ಪರಿಶೀಲಿಸಿದ್ದ CWRC ಕೃಷ್ಣರಾಜಸಾಗರ (KRS) ಮತ್ತು ಕಬಿನಿ ಜಲಾಶಯಗಳಿಂದ ಜುಲೈ 29ರಿಂದ ಆಗಸ್ಟ್ 12ರವರೆಗೆ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ಧಾರವನ್ನು CWMA ಜುಲೈ 30ರಂದು ನಡೆದ ತನ್ನ 54ನೇ ತುರ್ತು ಸಭೆಯಲ್ಲಿ ಎತ್ತಿಹಿಡಿದಿತ್ತು.
ಈ ಆದೇಶದ ಹೊರತಾಗಿಯೂ ಜುಲೈ 29ರಿಂದ ಆಗಸ್ಟ್ 2ರವರೆಗೆ ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಒಳಹರಿವು ಕೇವಲ 158 ರಿಂದ 550 ಕ್ಯೂಸೆಕ್ನಷ್ಟಿದ್ದು, ನಿಗದಿಪಡಿಸಿದ 3,500 ಕ್ಯೂಸೆಕ್ಗಿಂತ ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಅಲ್ಲದೆ, ಕರ್ನಾಟಕದ ಜಲಾಶಯಗಳಲ್ಲಿ ಆದೇಶವನ್ನು ಪಾಲಿಸಲು ಅಗತ್ಯವಿರುವಷ್ಟು ನೀರಿದೆ ಎಂದು ತಮಿಳುನಾಡು ವಾದಿಸಿದೆ.