ತಿರುವನಂತಪುರಂ, ಆ. 03 (DaijiworldNews/AK): ಕೇರಳ ರಾಜ್ಯಾದ್ಯಂತ ಮಳೆಯ ಅವಾಂತರಗಳಿಂದಾಗಿ 15 ಜನರು ಮೃತಪಟ್ಟಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ. ಡಿ. ಸತೀಶನ್ ಇಂದು ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಜ್ಯಾದ್ಯಂತ 316 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಇದುವರೆಗೂ 11,018 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.
ಸಾವುಗಳ ಬಗ್ಗೆ ಮಾಹಿತಿ ನೀಡಿದ ಕೇರಳದ ಸಿಎಂ, ಕೊಟ್ಟಾಯಂ ಜಿಲ್ಲೆಯಿಂದ 3 ಸಾವುಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ಮೃತರ ಪೈಕಿ ಸಣ್ಣ ಮಗುವೂ ಸೇರಿದೆ. ಕೊಟ್ಟಾಯಂನಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಪೂಂಜಾರ್ ಶಾಸನಸಭಾ ಕ್ಷೇತ್ರದವರಾಗಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂನಲ್ಲಿ ಇಬ್ಬರು ಮೃತಪಟ್ಟಿದ್ದರೆ, ಇಡುಕ್ಕಿ ಮತ್ತು ಮೂವಾಟ್ಟುಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ 2, ಮಲಪ್ಪುರಂನಲ್ಲಿ 4 ಮತ್ತು ಕಣ್ಣೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕೋಝಿಕ್ಕೋಡ್ನಿಂದಲೂ ಒಂದು ಸಾವು ವರದಿಯಾಗಿದೆ.
ಕೇರಳದಲ್ಲಿ ನಾಪತ್ತೆಯಾಗಿರುವ 7 ಜನರ ಪೈಕಿ ಇಬ್ಬರು ಕೊಲ್ಲಂ, ಇಬ್ಬರು ಕಣ್ಣೂರು ಮತ್ತು ಒಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ ಎಂದು ಸಿಎಂ ಸತೀಶನ್ ತಿಳಿಸಿದ್ದಾರೆ. ಇದಲ್ಲದೆ ಇಡುಕ್ಕಿ ಮತ್ತು ಮೂವಾಟ್ಟುಪುಳದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 3 ಮತ್ತು ಆಗಸ್ಟ್ 6ರಂದು ಕೇರಳದಲ್ಲಿ ಗಾಳಿಸಹಿತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಗಾಳಿಯ ವೇಗ ಗಂಟೆಗೆ 50 ಕಿ.ಮೀವರೆಗೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ 2 ಮತ್ತು ಆಗಸ್ಟ್ 3ರಂದು ವಿಶೇಷವಾಗಿ ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಸಮುದ್ರದ ಕೊರೆತ ಹೆಚ್ಚಿರಲಿದ್ದು, ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತಲುಪಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 8 ಲಕ್ಷ ಪರಿಹಾರ ಹಾಗೂ ಶವಸಂಸ್ಕಾರದ ವೆಚ್ಚಕ್ಕಾಗಿ ತಕ್ಷಣವೇ 10,000 ರೂ. ಒದಗಿಸಲಾಗುವುದು. ಭೂಕುಸಿತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ನೀಡಲಾಗುತ್ತಿದ್ದ ಹಣವನ್ನು 10 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.