ದೆಹಲಿ, ಆ. 03 (DaijiworldNews/AA): ಗ್ಲಾಸ್ಗೋದಲ್ಲಿ ನಡೆದ 2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, "ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಭಾರತ 13 ಚಿನ್ನ ಸೇರಿದಂತೆ 39 ಪದಕಗಳನ್ನು ಗೆದ್ದಿರುವುದು ಸಂತೋಷ ತಂದಿದೆ. ಪದಕ ವಿಜೇತರಿಗೆ ಅಭಿನಂದನೆಗಳು. ಕ್ರೀಡಾಕೂಟದ ಉದ್ದಕ್ಕೂ, ನಮ್ಮ ಪ್ರತಿಭಾನ್ವಿತ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
"ಕ್ರೀಡಾಪಟುಗಳ ಕಠಿಣ ಪರಿಶ್ರಮ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಮುಂದಿನ ಪ್ರಯತ್ನಗಳಿಗೆ ಇಡೀ ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಿ ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರಲಿ" ಎಂದು ಅಂಭಿನಂದನೆ ಸಲ್ಲಿಸಿದ್ದಾರೆ.