ನವದೆಹಲಿ, ಆ. 03 (DaijiworldNews/AA): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಆರು ಮಂದಿ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಡಬ್ಲ್ಯೂಎಫ್ಐ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ಪ್ರಕಟಿಸಿದೆ.
2023 ರಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಬಳಿಕ ನಂತರ ಸುಪ್ರೀಂ ಕೋರ್ಟ್ ಸೂಚನೆಯಂತೆ ಬ್ರಿಜ್ಭೂಷಣ್ ವಿರುದ್ಧ ಪೋಕ್ಸೋ ಮತ್ತು ಲೈಂಗಿಕ ಕಿರುಕುಳ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಸುಮಾರು ಎರಡು ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ಮಹತ್ವದ ತೀರ್ಪು ನೀಡಿದೆ.