ಕಣ್ಣೂರು, ಆ. 03 (DaijiworldNews/TA): ಕೇರಳದಲ್ಲಿ ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಕಣ್ಣೂರು ಜಿಲ್ಲೆಯಲ್ಲಿ ಮಳೆ ಸಂಬಂಧಿತ ದುರ್ಘಟನೆಯೊಂದರಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತಲಶ್ಶೇರಿ ಸಮೀಪದ ಕೈಥೇರಿಯ ನಿವಾಸಿ ಅಪ್ಪು ಅಲಿಯಾಸ್ ರರೀಶ್ (43) ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಜಾರಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ 18 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಒಟ್ಟು 905 ಮಂದಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ 384 ಮಹಿಳೆಯರು ಹಾಗೂ 324 ಪುರುಷರು ಸೇರಿದ್ದಾರೆ. ತಳಿಪರಂಬದಲ್ಲಿ 8, ಇರಿಟ್ಟಿಯಲ್ಲಿ 6, ಪಯ್ಯನ್ನೂರಿನಲ್ಲಿ 3 ಹಾಗೂ ತಲಶ್ಶೇರಿಯಲ್ಲಿ 1 ಪರಿಹಾರ ಶಿಬಿರ ಕಾರ್ಯನಿರ್ವಹಿಸುತ್ತಿದೆ. ಪಯ್ಯವೂರು ಗ್ರಾಮದ ಚೆರುಪುಷ್ಪಂ ಶಾಲೆಯ ಶಿಬಿರದಲ್ಲಿ ಅತಿ ಹೆಚ್ಚು 184 ಮಂದಿಗೆ ವಸತಿ ಕಲ್ಪಿಸಲಾಗಿದೆ.
ಭೂಕುಸಿತ ಭೀತಿ - ರಾಷ್ಟ್ರೀಯ ಹೆದ್ದಾರಿ 85ರಲ್ಲಿ ಸಂಚಾರ ಸಂಪೂರ್ಣ ಬಂದ್ : ನಿರಂತರ ಮಳೆಯಿಂದ ಇಡುಕ್ಕಿ ಜಿಲ್ಲೆಯ ನೇರ್ಯಮಂಗಲಂ-ಆದಿಮಾಲಿ ನಡುವಿನ ರಾಷ್ಟ್ರೀಯ ಹೆದ್ದಾರಿ 85ರಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿರುವ ಕಾರಣ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿ ಚಟುವಟಿಕೆಗಳ ಮೇಲೂ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ಹೇರಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ.
ಕಣ್ಣೂರು ಮತ್ತು ವಯನಾಡನ್ನು ಸಂಪರ್ಕಿಸುವ ಕೇಳಕಂ–ಬಾಯ್ಸ್ಟೌನ್–ಮಾನಂತವಾಡಿ (ಪಾಲ್ಚುರಾಮ್ ಘಾಟ್) ರಸ್ತೆಯನ್ನೂ ಭೂಕುಸಿತ, ಬಂಡೆಗಳು ಉರುಳುವ ಹಾಗೂ ಮರಗಳು ಬೀಳುವ ಅಪಾಯದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ವಯನಾಡಿಗೆ ತೆರಳುವವರು ನೆಡುಂಪೊಯಿಲ್ ಹಾಗೂ ಕುಟ್ಯಾಡಿ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಇಂದು ಕೇರಳದ ಎಲ್ಲಾ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಘೋಷಿಸಲಾಗಿದೆ. ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಗುಜರಾತ್ ಕರಾವಳಿಯಿಂದ ಉತ್ತರ ಕೇರಳ ಕರಾವಳಿವರೆಗೆ ಕಡಿಮೆ ಒತ್ತಡದ ಪ್ರದೇಶ ಮುಂದುವರಿದಿರುವ ಕಾರಣ ಆಗಸ್ಟ್ 6ರವರೆಗೆ ಕೇರಳದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಅಧಿಕಾರಿಗಳು ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಭೂಕುಸಿತ ಸಂಭವಿಸುವ ಗುಡ್ಡಗಾಡು ಪ್ರದೇಶಗಳು ಹಾಗೂ ಜಲಾವೃತ ಪ್ರದೇಶಗಳಿಂದ ದೂರವಿರಲು ಮನವಿ ಮಾಡಿದ್ದಾರೆ.