ಬೆಂಗಳೂರು, ಆ. 03 (DaijiworldNews/TA): ರಾಜ್ಯಾದ್ಯಂತ 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ನಡೆದ ಲಿಖಿತ ಪರೀಕ್ಷೆ ಶಾಂತಿಯುತವಾಗಿ ಪೂರ್ಣಗೊಂಡಿತು. ಈ ವೇಳೆ ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಯೊಬ್ಬರು ತಮ್ಮ ಎಂಟು ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಪರೀಕ್ಷೆ ಬರೆಯಲು ತೆರಳುವ ಮುನ್ನ ತಾಯಿ ಮಗುವನ್ನು ತಂದೆಯ ಬಳಿ ಬಿಟ್ಟು ಒಳಗೆ ಹೋಗಿದ್ದರು. ಆದರೆ ತಾಯಿ ಕಾಣದೆ ಮಗು ಜೋರಾಗಿ ಅಳಲು ಆರಂಭಿಸಿತು.
ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಸೀರೆಯಲ್ಲೇ ಜೋಕಾಲಿ ಕಟ್ಟಿ ಮಗುವನ್ನು ಸಮಾಧಾನಪಡಿಸಿ ಮುದ್ದಾಗಿ ತೂಗಿದರು. ಮಹಿಳಾ ಪೊಲೀಸರ ಈ ಮಾನವೀಯ ಕಾರ್ಯ ಸ್ಥಳದಲ್ಲಿದ್ದವರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.