ಪಟಿಯಾಲಾ, ಆ. 03 (DaijiworldNews/AA): ದೃಢಸಂಕಲ್ಪ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ ಎಂಬುದಕ್ಕೆ ಪಂಜಾಬ್ನ ಪಟಿಯಾಲಾ ಜಿಲ್ಲೆಯ ಬಿರಾರ್ವಾಲ್ ಗ್ರಾಮದ ರೈತನ ಮಗಳು ಸಿಮ್ರನ್ದೀಪ್ ಕೌರ್ ಉತ್ತಮ ಉದಾಹರಣೆಯಾಗಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು ಅಖಿಲ ಭಾರತ 15ನೇ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸಿಮ್ರನ್ದೀಪ್ ಅವರ ಈ ಸಾಧನೆಗಾಗಿ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ಜೂನ್ 22ರಂದು ನಡೆದ ವಿಶೇಷ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ರಾಜ್ಯಪಾಲರಿಂದ ಪುತ್ರಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣವನ್ನು ಕಂಡು ತಂದೆ ಕುಲದೀಪ್ ಸಿಂಗ್ ಸೇರಿದಂತೆ ಕುಟುಂಬದ ಸದಸ್ಯರು ಭಾವುಕರಾದರು.
ಸಿಮ್ರನ್ದೀಪ್ ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದರು. ಇದಕ್ಕೂ ಮುನ್ನ ಮೂರು ಬಾರಿ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ. ಆದರೂ ನಿರಾಸೆಯಾಗದೆ ತಮ್ಮ ತಯಾರಿ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿಕೊಂಡರು.
ದುಬಾರಿ ಕೋಚಿಂಗ್ ಕೇಂದ್ರಗಳಿಗೆ ಸೇರುವ ಬದಲು ಸಿಮ್ರನ್ದೀಪ್ ಅವರು ಮನೆಯಲ್ಲಿಯೇ ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಸ್ವಯಂ ಅಧ್ಯಯನ ನಡೆಸಿದರು. 2022ರಲ್ಲಿ ಸಂಕಲ್ಪ ಸಂಸ್ಥೆಯಿಂದ ಮಾರ್ಗದರ್ಶನ ಪಡೆದರೂ, ಅವರ ಯಶಸ್ಸಿನ ಪ್ರಮುಖ ಆಧಾರ ಸ್ವಯಂ ಅಧ್ಯಯನವೇ ಆಗಿತ್ತು.
ಯುಪಿಎಸ್ಸಿ ಬರೆಯುವ ಕನಸು ಸಿಮ್ರನ್ದೀಪ್ ಅವರಿಗೆ ಶಾಲಾ ದಿನಗಳಲ್ಲಿಯೇ ಮೂಡಿತ್ತು. ವೈದ್ಯಕೀಯ ವಿಭಾಗದಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪಟಿಯಾಲಾದ ಖಾಲ್ಸಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಯುಪಿಎಸ್ಸಿ ಪರೀಕ್ಷೆಗೆ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ಅನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು.
ಆರ್ಥಿಕ ಸವಾಲುಗಳ ನಡುವೆಯೂ ರೈತನಾಗಿರುವ ತಂದೆ ಕುಲದೀಪ್ ಸಿಂಗ್ ಹಾಗೂ ಗೃಹಿಣಿಯಾದ ತಾಯಿ ಅಮನ್ದೀಪ್ ಕೌರ್ ಪುತ್ರಿಯ ಕನಸಿಗೆ ಸದಾ ಬೆಂಬಲವಾಗಿ ನಿಂತರು. ಅವರ ತ್ಯಾಗದ ಫಲವಾಗಿ ಸಿಮ್ರನ್ದೀಪ್ ಅವರು ಯುಪಿಎಸ್ಸಿ ಯಲ್ಲಿ 15ನೇ ರ್ಯಾಂಕ್ ಪಡೆಯುವಲ್ಲಿ ಸಫಲರಾಗುತ್ತಾರೆ.