ಸಕಲೇಶಪುರ, ಆ. 02 (DaijiworldNews/TA): ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮೈಸೂರು ರೈಲ್ವೆ ವಿಭಾಗದ ಯೆಡಕುಮಾರಿ ಮತ್ತು ಶಿರಿಬಾಗಿಲು ರೈಲ್ವೆ ನಿಲ್ದಾಣಗಳ ನಡುವಿನ ಅರೆಬೆಟ್ಟ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಪರಿಣಾಮ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಗಳು ರೈಲು ಹಳಿಗಳ ಮೇಲೆ ಬಿದ್ದಿದ್ದು, ಬೆಂಗಳೂರು-ಮಂಗಳೂರು ಪ್ರಮುಖ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.



ಭೂಕುಸಿತದಿಂದ ಬೆಂಗಳೂರು, ಮಂಗಳೂರು ಹಾಗೂ ಕರಾವಳಿ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಏಳು ಪ್ರಮುಖ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಿದೆ. ಇದರಿಂದ ವಿವಿಧ ರೈಲು ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ.
ಭಾಗಶಃ ರದ್ದಾದ ರೈಲುಗಳು:
16585 ಬೆಂಗಳೂರು–ಮುರ್ಡೇಶ್ವರ ಎಕ್ಸ್ಪ್ರೆಸ್ – ಹಾಸನದವರೆಗೆ ಮಾತ್ರ ಸಂಚಾರ.
16511 ಕೆಎಸ್ಆರ್ ಬೆಂಗಳೂರು–ಕೋಝಿಕ್ಕೋಡ್ ಎಕ್ಸ್ಪ್ರೆಸ್ – ಹಾಸನದಲ್ಲಿ ಸೇವೆ ಸ್ಥಗಿತ.
17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ – ಹಾಸನದವರೆಗೆ ಮಾತ್ರ ಸಂಚಾರ.
16595 ಕೆಎಸ್ಆರ್ ಬೆಂಗಳೂರು–ಕಾರವಾರ ಎಕ್ಸ್ಪ್ರೆಸ್ – ಸಕಲೇಶಪುರದವರೆಗೆ ಮಾತ್ರ ಸಂಚಾರ.
ಹಿಂತಿರುಗುವ ರೈಲುಗಳಲ್ಲೂ ಬದಲಾವಣೆ :
16586 ಮುರ್ಡೇಶ್ವರ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ – ಸುಬ್ರಹ್ಮಣ್ಯ ರಸ್ತೆ ನಿಲ್ದಾಣದವರೆಗೆ ಮಾತ್ರ.
16512 ಕೋಝಿಕ್ಕೋಡ್–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ – ಕಬಕ ಪುತ್ತೂರಿನವರೆಗೆ ಮಾತ್ರ ಸಂಚಾರ.
17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ಪ್ರೆಸ್ – ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಸೇವೆ ಅಂತ್ಯ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ರೈಲ್ವೆ ಸಿಬ್ಬಂದಿ ಭಾರೀ ಯಂತ್ರೋಪಕರಣಗಳ ನೆರವಿನಿಂದ ಹಳಿ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ರೈಲು ಸಂಚಾರ ಪುನರಾರಂಭವಾಗುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ರೈಲುಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದ ಬಳಿಕವೇ ಪ್ರಯಾಣ ಆರಂಭಿಸುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.