ಬೆಂಗಳೂರು, ಆ. 02 (DaijiworldNews/TA): ರಾಜ್ಯದಲ್ಲಿ ಈ ಬಾರಿ ಎದುರಾಗಿರುವ ಮಳೆ ಕೊರತೆಯ ಪರಿಣಾಮ ಇದೀಗ ಜನರ ದಿನನಿತ್ಯದ ಜೀವನದ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭತ್ತದ ಬಿತ್ತನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಕಳೆದ ಒಂದು ದಶಕದಲ್ಲೇ ಕಾಣದಷ್ಟು ದರ ಹೆಚ್ಚಳ ದಾಖಲಾಗಿದೆ. ಸ್ಟೀಮ್, ಸೋನಾ ಮಸೂರಿ ಸೇರಿದಂತೆ ಬಹುತೇಕ ಎಲ್ಲಾ ವಿಧದ ಅಕ್ಕಿ ಬೆಲೆ ಕಳೆದ ಎರಡು ತಿಂಗಳಲ್ಲಿ ಶೇ.35ರವರೆಗೆ ಏರಿಕೆಯಾಗಿದೆ.

ಮಳೆ ಕೊರತೆಯಿಂದ ಭತ್ತದ ಬೆಳೆ ಮೇಲೆ ಅನಿಶ್ಚಿತತೆ ಉಂಟಾಗಿದ್ದು, ಉತ್ಪಾದನೆ ಕುಸಿಯುವ ಆತಂಕ ಮಾರುಕಟ್ಟೆಯಲ್ಲಿ ಪ್ರತಿಫಲಿಸಿದೆ. ಪರಿಣಾಮವಾಗಿ ಅಕ್ಕಿಯ ಸಗಟು ಹಾಗೂ ಚಿಲ್ಲರೆ ದರಗಳು ಏರಿಕೆಯಾಗಿದ್ದು, ಗ್ರಾಹಕರ ಜತೆಗೆ ವ್ಯಾಪಾರಿಗಳೂ ಸಂಕಷ್ಟ ಎದುರಿಸುತ್ತಿದ್ದಾರೆ.
ಭತ್ತದ ಬೆಳೆಗೆ ಸಮರ್ಪಕ ಮಳೆ ಹಾಗೂ ನೀರಾವರಿ ಅತ್ಯಗತ್ಯ. ಆದರೆ ಈ ಬಾರಿ ರಾಜ್ಯದಲ್ಲಿ ಸುಮಾರು ಶೇ.50ರಷ್ಟು ಮಳೆ ಕೊರತೆಯಾಗಿರುವುದರಿಂದ ರೈತರು ಬಿತ್ತನೆ ಮುಂದೂಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೇ ಕಾರಣಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರೊಂದಿಗೆ ಅಕ್ಕಿಯ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಪ್ರತಿದಿನ ಸುಮಾರು 50 ಲೋಡ್ ಅಕ್ಕಿ ಆಗಮಿಸುತ್ತಿದ್ದರೆ, ಈಗ ದರ ಏರಿಕೆ ಹಾಗೂ ಪೂರೈಕೆ ಕುಸಿತದಿಂದ ಮಾರುಕಟ್ಟೆಗೆ ಬರುತ್ತಿರುವ ಲೋಡ್ಗಳ ಸಂಖ್ಯೆಯೂ ಇಳಿಕೆಯಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕೂಡ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಸದ್ಯ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಕ್ಕಿ ಉತ್ಪಾದನೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಒಂದೊಮ್ಮೆ ಹಿಂಗಾರು ಮಳೆಯೂ ಕೈಕೊಟ್ಟರೆ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಜೇಬಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.