ಮೈಸೂರು, ಆ. 01 (DaijiworldNews/TA): ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಶ್ರಮದ ವತಿಯಿಂದ ಅಪರೂಪದ ಸ್ಮರಣಿಕೆಯೊಂದನ್ನು ಉಡುಗೊರೆಯಾಗಿ ನೀಡಲಾಯಿತು. ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯನ್ನು ಕೆತ್ತಿ ದೇಶಾದ್ಯಂತ ಖ್ಯಾತಿ ಗಳಿಸಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ಸಮರ್ಪಿಸಲಾಯಿತು.

ಸುಮಾರು 8.5 ಕೆಜಿ ತೂಕ ಹಾಗೂ 1.5 ಅಡಿ ಎತ್ತರ ಹೊಂದಿರುವ ಈ ಮೂರ್ತಿಯನ್ನು ವಿಯೆಟ್ನಾಂ ಮಾರ್ಬಲ್ ಕಲ್ಲಿನಿಂದ ಕೆತ್ತಲಾಗಿದ್ದು, ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯನ್ನು ಆಧರಿಸಿ ನಿರ್ಮಿಸಲಾಗಿದೆ. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಈ ವಿಶೇಷ ಕಲಾಕೃತಿಯನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಸಹ ಉಪಸ್ಥಿತರಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು.
ಈ ಸಮಾರಂಭವು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ‘ವಿವೇಕ ಸ್ಮಾರಕ’ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆಯಿತು. ಸ್ವಾಮಿ ವಿವೇಕಾನಂದರ ಮಾನವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪವನ್ನು ಈ ಕಾರ್ಯಕ್ರಮ ಪುನರುಚ್ಚರಿಸಿತು. ಒಂದು ದಶಕಕ್ಕೂ ಹೆಚ್ಚು ಕಾಲ ಈ ಸ್ಮಾರಕ ನಿರ್ಮಾಣದ ನಿರೀಕ್ಷೆಯಲ್ಲಿದ್ದ ಸಾವಿರಾರು ಸ್ವಾಮಿ ವಿವೇಕಾನಂದರ ಅಭಿಮಾನಿಗಳಿಗೆ ಈ ಉದ್ಘಾಟನೆ ಐತಿಹಾಸಿಕ ಕ್ಷಣವಾಗಿದ್ದು, ಮೈಸೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಗಿ ದಾಖಲಾಗಿದೆ.