ಮೈಸೂರು, ಆ. 01 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆಂಧ್ರಪ್ರದೇಶದಿಂದ ಕರ್ನಾಟಕದ ಮೈಸೂರಿಗೆ ಆಗಮಿಸಿ, ನಗರದ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಪ್ರಧಾನಿ ಮೋದಿ ಅವರು ಆಶ್ರಮದ ಆವರಣದಲ್ಲಿ ಸಸಿಯನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಈ ವೇಳೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪ್ರಧಾನಿ ಅವರೊಂದಿಗೆ ಸೇರಿ ಸಸಿ ನೆಟ್ಟರು. ಮೈಸೂರಿನ ರಾಮಕೃಷ್ಣ ಆಶ್ರಮವು ಐತಿಹಾಸಿಕ ಮಹತ್ವ ಹೊಂದಿದ್ದು, 1892ರಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ತಂಗಿದ್ದರು. ಆ ಐತಿಹಾಸಿಕ ಘಟನೆಯನ್ನು ಸ್ಮರಿಸುವ ಉದ್ದೇಶದಿಂದ ಈ ‘ವಿವೇಕ ಸ್ಮಾರಕ’ವನ್ನು ನಿರ್ಮಿಸಲಾಗಿದೆ.
ಹೊಸದಾಗಿ ಉದ್ಘಾಟನೆಯಾದ ಈ ಸಾಂಸ್ಕೃತಿಕ ಯುವ ಕೇಂದ್ರವು ಸ್ವಾಮಿ ವಿವೇಕಾನಂದರ ಆದರ್ಶಗಳು, ಚಿಂತನೆಗಳು ಮತ್ತು ಯುವಜನರಲ್ಲಿ ರಾಷ್ಟ್ರಭಕ್ತಿ, ಸೇವಾ ಮನೋಭಾವ ಹಾಗೂ ಮೌಲ್ಯಾಧಾರಿತ ಜೀವನದ ಸಂದೇಶವನ್ನು ಸಾರುವ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಸ್ವಾಮೀಜಿಗಳು, ಗಣ್ಯರು, ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.