ನವದೆಹಲಿ, ಆ. 01 (DaijiworldNews/AA): ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಯ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ದ್ವೇಷಭರಿತ ವಿಷಯಗಳನ್ನು ಪ್ರಸಾರ ಮಾಡಿದ ಆರೋಪದಡಿ ಹಲವು ಯೂಟ್ಯೂಬರ್ಗಳು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧ ದೆಹಲಿ ಪೊಲೀಸರು ಕಾನೂನು ಕ್ರಮ ಜರುಗಿಸಲು ಸಜ್ಜಾಗಿದ್ದಾರೆ.

ಈ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಪ್ರಸಾರ ಹಾಗೂ ಡಿಜಿಟಲ್ ಪ್ರಚಾರದಲ್ಲಿ ತೊಡಗಿರುವ ಮೂರು ಖಾಸಗಿ ಕಂಪನಿಗಳ ಚಟುವಟಿಕೆಗಳನ್ನೂ ಪರಿಶೀಲಿಸುತ್ತಿದೆ. ಪ್ರತಿಭಟನೆಗೆ ಸಂಬಂಧಿಸಿದ ಡಿಜಿಟಲ್ ಕಂಟೆಂಟ್ ಹರಡುವಿಕೆಯಲ್ಲಿ ಈ ಸಂಸ್ಥೆಗಳ ಪಾತ್ರವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳು ತನಿಖಾಧಿಕಾರಿಗಳ ನಿಗಾದಲ್ಲಿವೆ. ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್ ಗಳು, ತಪ್ಪು ಮಾಹಿತಿ ಹರಡುವ ವೀಡಿಯೋಗಳು ಹಾಗೂ ಲೈವ್ ಪ್ರಸಾರಗಳನ್ನೂ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಸುಮಾರು 180 ಸಾಮಾಜಿಕ ಜಾಲತಾಣ ಖಾತೆಗಳನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ. ವದಂತಿಗಳನ್ನು ಹರಡುವುದು ಅಥವಾ ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸುವಲ್ಲಿ ಈ ಖಾತೆಗಳ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ತನಿಖೆ ಬಳಿಕ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.