ಚಿಕ್ಕಮಗಳೂರು, ಆ. 01 (DaijiworldNews/AA): ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಅವರು, "ನಾಮನಿರ್ದೇಶಿತ ಸದಸ್ಯರ ಮತದಾನದ ವಿಷಯವೇ ಈ ವಿವಾದದ ಕೇಂದ್ರಬಿಂದುವಾಗಿತ್ತು. 1997 ರಿಂದಲೂ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವ ಪದ್ಧತಿ ಇತ್ತು. ಆದರೆ ಕಾನೂನು ಹೋರಾಟದಲ್ಲಿ ತೀರ್ಪು ವ್ಯತಿರಿಕ್ತವಾಗಿ ಬಂದಿದ್ದು, ನ್ಯಾಯಾಲಯದ ಆದೇಶಕ್ಕೆ ಶಿರಸಾವಂದಿಸಿ ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಿ ಪತ್ರ ಬರೆದಿದ್ದಾರೆ.
"ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಪ್ರಾಮಾಣಿಕ ಹಾಗೂ ಪಕ್ಷಾತೀತವಾಗಿ ಸಭಾಪತಿ ಪೀಠದ ಗೌರವ ಎತ್ತಿಹಿಡಿದಿದ್ದೇನೆ. ಈ ತೀರ್ಪಿನಿಂದ ಯಾರೂ ಎದೆಗುಂದಬೇಡಿ. ಅಧಿಕಾರ ಇಲ್ಲದಿದ್ದರೂ ನಿಮ್ಮ ಜೊತೆಯಲ್ಲೇ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಕ್ತಿಯುತವಾಗಿ ಮುನ್ನಡೆಯೋಣ ಎಂದು ಧೈರ್ಯ ತುಂಬಿದ್ದಾರೆ. 9 ಮತಗಳ ಅಂತರದಿಂದ ಗೆಲುವು ಸಾಧಿಸಿ ನೂತನ ಎಂಎಲ್ಸಿ ಆಗಿ ಹೊರಹೊಮ್ಮಿರುವ ಗಾಯತ್ರಿ ಶಾಂತೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಾಣೇಶ್, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿ" ಎಂದು ತಿಳಿಸಿದ್ದಾರೆ.