ನವದೆಹಲಿ, ಜು. 28 (DaijiworldNews/AA): ಕೇಂದ್ರ ಸರ್ಕಾರ ಪ್ರಧಾನ್ ಅವರನ್ನು ತೆಗೆದುಹಾಕುವ ಮೂಲಕ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯ ಮಾಡಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಇಂದು ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, "ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಸರ್ಕಾರವು ತನ್ನ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ" ಎಂದು ಹೇಳಿದ್ದಾರೆ.
"ಸರ್ಕಾರವನ್ನು ತಲೆಬಾಗುವಂತೆ ಮಾಡಿದ ಯುವಜನತೆಯ ಮನೋಬಲ ಮತ್ತು ಒಗ್ಗಟ್ಟಿಗೆ ನಾನು ಸಲಾಂ ಹೇಳುತ್ತೇನೆ. ಪ್ರಧಾನ್ ಅವರನ್ನು ಪದಚ್ಯುತಿಗೊಳಿಸಿ ಮಂತ್ರಿಯನ್ನು ಉಳಿಸಿದ್ದಕ್ಕೆ ಬಿಜೆಪಿ ಸಂಸದರು ನಿಟ್ಟುಸಿರು ಬಿಟ್ಟಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಡೀ ಶಿಕ್ಷಣ ವ್ಯವಸ್ಥೆ, ಪರೀಕ್ಷೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಒಂದೇ ಬಣ್ಣ ಬಳಿಯುವ ಮೂಲಕ ಅವುಗಳನ್ನು ನಾಶಮಾಡಲು ಯತ್ನಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಗತ್ತಿನ ಅತಿ ದೊಡ್ಡ ಪಕ್ಷವೇ ಮಂಡಿಯೂರುವಂತೆ ಆಂದೋಲನ ರೂಪಿಸಿತು. ಸರ್ಕಾರದ ಈ ಧೋರಣೆ ಬದಲಾಗಬೇಕು" ಎಂದಿದ್ದಾರೆ.