ಮುಂಬೈ, ಜು. 27 (DaijiworldNews/AA): ನಮ್ಮ ಕುಟುಂಬ ಇ20 ಎಥೆನಾಲ್ ಮಿಶ್ರಣ ಕಾರ್ಯಕ್ರಮದಿಂದ ಅಕ್ರಮ ಲಾಭ ಗಳಿಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡೀಪ್ಫೇಕ್ ವೀಡಿಯೋಗಳು ಹಾಗೂ ನಿಂದನೀಯ ಪೋಸ್ಟ್ಗಳ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಿತಿನ್ ಗಡ್ಕರಿ ಅವರು ಆಪಾದಿತ ಮಾನನಷ್ಟ ಪೋಸ್ಟ್ಗಳು ಮತ್ತು ಡೀಪ್ಫೇಕ್ ವಿಷಯದ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮೆಟಾ, ಎಕ್ಸ್ ಮತ್ತು ಗೂಗಲ್ನಂತಹ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳು ಹಾಗೂ ಸುಳ್ಳು ಮಾಹಿತಿ ಹರಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದೆ.
ಜುಲೈ 7ರಂದು ತಮ್ಮ ಕುಟುಂಬ ಸದಸ್ಯರ ಕಂಪನಿಗಳು ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಅದಕ್ಕಾಗಿಯೇ ಗಡ್ಕರಿ ಹೆಚ್ಚಿನ ಎಥೆನಾಲ್ ಪೆಟ್ರೋಲ್ಗೆ ಒತ್ತಾಯಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಆದರೆ ಅವರ ಕಂಪನಿಗಳು ಎಥೆನಾಲ್ ಉತ್ಪಾದನೆಯ ಮೇಲೆ ಅವಲಂಬಿತವಾಗಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಎಥೆನಾಲ್ ಮಿಶ್ರಣ ನೀತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ವಹಿಸುತ್ತಿದ್ದರೂ, ಗಡ್ಕರಿ ಮತ್ತು ಅವರ ಕುಟುಂಬದ ಹೆಸರನ್ನು ಇದಕ್ಕೆ ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವರ ಪರ ವಕೀಲರು ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜಾ ಅವರಿದ್ದ ಪೀಠವು ಕೇಸ್ ದಾಖಲಿಸಲು ಅನುಮತಿ ನೀಡಿದೆ.