ನವದೆಹಲಿ, ಜು. 27 (DaijiworldNews/AA): ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸದಸ್ಯರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಲಾಠಿಚಾರ್ಜ್ ಮಾಡುವಂತಿಲ್ಲ. ಶಾಂತಿಯುತ ಪ್ರತಿಭಟನೆ ಪ್ರಜೆಗಳ ಸಂವಿಧಾನಾತ್ಮಕ ಹಕ್ಕು ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠವು, ಸಂವಿಧಾನದ ಅಡಿಯಲ್ಲಿ ಪ್ರಜೆಗಳಿಗೆ ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಶಾಂತಿಯುತ ಆಂದೋಲನ ನಡೆಯುತ್ತಿರುವಾಗ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪೊಲೀಸರ ಕಡೆಯಿಂದ ಮಿತಿಮೀರಿದ ಬಲಪ್ರಯೋಗ ನಡೆದಿದ್ದರೆ ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಪ್ರತಿಭಟನೆಗಳನ್ನು ನಿರ್ವಹಿಸುವಾಗ ಶಿಸ್ತು ಕಾಯ್ದುಕೊಳ್ಳಲು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಪೊಲೀಸ್ ಶಿಷ್ಟಾಚಾರ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳನ್ನು ಪ್ರತಿನಿಧಿಸುವ ವಕೀಲರಿಗೂ ವಿಚಾರಣೆಯಲ್ಲಿ ಭಾಗವಹಿಸಲು ಪೀಠ ಅವಕಾಶ ಕಲ್ಪಿಸಿತು. "ವಿದ್ಯಾರ್ಥಿಗಳಾಗಲಿ ಅಥವಾ ಪೊಲೀಸರಾಗಲಿ, ಯಾರಿಗೇ ಗಾಯಗಳಾದರೂ ಅದು ಸಮಾನ ಕಾಳಜಿಯ ವಿಷಯವಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ರಕ್ಷಣೆಗೆ ಸಾಕಷ್ಟು ಹೆಲ್ಮೆಟ್ ಹಾಗೂ ಉಪಕರಣಗಳನ್ನು ಏಕೆ ಒದಗಿಸಿಲ್ಲ ಎಂದು ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಲಾಗುವುದು" ಎಂದು ಪೀಠ ತಿಳಿಸಿದೆ.