ನವದೆಹಲಿ, ಜು. 27 (DaijiworldNews/AA): ವಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ಮಂಡಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾವನ್ನು ಮಟ್ಟಹಾಕಲು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026 (Public Examinations (Prevention of Unfair Means) Amendment Bill, 2026) ಮಂಡಿಸಲಾಯಿತು.
ಮಸೂದೆಯ ಕುರಿತು ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, "ಇದು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ದಿನವಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾನೂನನ್ನು ತಂದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಗದ್ದಲ ಎಬ್ಬಿಸದೆ ಚರ್ಚೆಯಲ್ಲಿ ಭಾಗವಹಿಸಬೇಕು" ಎಂದು ಮನವಿ ಮಾಡಿಕೊಂಡಿದ್ದರು.
ಮಧ್ಯಾಹ್ನದ ಬಳಿಕ ಈ ಮಸೂದೆ ಕುರಿತು ಚರ್ಚೆ ಆರಂಭವಾಗಲಿದೆ. ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಯುವ ಸಂಸದರು ಮಸೂದೆ ಕುರಿತು ತಮ್ಮ ಭಾಷಣ ಮಾಡಲಿದ್ದಾರೆ.