ಮೈಸೂರು, ಜು. 15 (DaijiworldNews/AK): ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಮನೆ ಮಾಡಿದೆ. ನಗರದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.

ಜು.17 ರಿಂದ ಶುರುವಾಗಲಿರುವ ಆಷಾಢ ಮಾಸದ ಸಿದ್ಧತೆಗಳನ್ನ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಸಿದ್ಧತೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೀನಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅನುಕೂಲ ಮಾಡಿ ಕೊಡಬೇಕು. ವಿಐಪಿಗಳಿಗೆ ಈಗಾಗಲೇ ಸಮಯ ನಿಗದಿ ಮಾಡಿದ್ದೇವೆ. 9:30 ರ ಒಳಗೆ ಎಲ್ಲಾ ವಿಐಪಿಗಳು ದರ್ಶನ ಮಾಡಬೇಕು. ಬೇಕಾದ ಸಮಯದಲ್ಲಿ ವಿಐಪಿಗಳು ಬಂದು ದರ್ಶನ ಮಾಡುವಂತಿಲ್ಲ. ವಿಐಪಿ ಗಳಿಗೆ ವಾಹನಗಳನ್ನ ಮಹಿಷಾಸುರ ಪ್ರತಿಮೆಯ ಬಳಿ ಪಾರ್ಕಿಂಗ್ ಮಾಡಬೇಕು. ವಿಐಪಿ ಹೆಸರು ಹೇಳಿಕೊಂಡು ಬಂದರೆ ಒಳಗೆ ಬಿಡುವುದಿಲ್ಲ ಎಂದರು.
ಈಗಾಗಲೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಕೂಡ ಆಷಾಢ ಮಾಸ ಪೂಜೆ ಸಿದ್ಧತೆ ಪರಿಶೀಲಿಸಿದ್ದಾರೆ. ಜು.17, 24, 31 ಆಗಸ್ಟ್ 7 ರಂದು ಆಢಾಶ ಶುಕ್ರವಾರ ಮತ್ತು ಆ.4 ರಂದು ಚಾಮುಂಡೇಶ್ವರಿ ವರ್ಧಂತಿ ಉತ್ಸವ ಇದೆ. 4 ವಾರಗಳ ವಾರಾಂತ್ಯದಂದು ಲಲಿತಮಹಲ್ ಮೈದಾನ ಮತ್ತು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಬಸ್ ಸೌಲಭ್ಯ ಇರಲಿದ್ದು, ರಾತ್ರಿ 8:30 ಕ್ಕೆ ಕೊನೆಯಾಗಲಿದೆ. ಬೆಟ್ಟದ ಪಾದದ ಕಾಲ್ನಡಿಗೆಯಿಂದ ಬರುವವರಿಗೆ ಬೆಳಗ್ಗೆ 5 ಗಂಟೆಯ ನಂತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅದಕ್ಕೂ ಮುನ್ನವೇ ಕಾಯೋದು ಬೇಡ ಎಂದು ಹೇಳಿದ್ದಾರೆ.
ಇನ್ನೂ ಭಕ್ತರ ವಿಶೇಷ ದರ್ಶನಕ್ಕೆ ಇದ್ದ 300 ರೂಪಾಯಿ ಟಿಕೆಟ್ ಅನ್ನು ಈ ಬಾರಿ ರದ್ದು ಮಾಡಲಾಗಿದೆ. 2 ಸಾವಿರ ರೂಪಾಯಿ ಟಿಕೆಟ್ ಖರೀದಿ ಮಾಡಿದರೆ ಸರತಿ ಇಲ್ಲದೇ ನೇರವಾಗಿ ದೇವರ ದರ್ಶನ ಪಡೆಯಬಹುದು. ಇನ್ನೂ ಈ ಟಿಕೆಟ್ ಜೊತೆಗೆ ಚಾಮುಂಡೇಶ್ವರಿ ಫೋಟೊ, ಲಾಡು ಪ್ರಸಾದ ಒಳಗೊಂಡ ವಿಶೇಷ ಕಿಟ್ ಕೊಡಲಾಗುತ್ತದೆ. ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳು ಬರ್ತಾರೆ. ಜುಲೈ 17 ರಿಂದ ಆಗಸ್ಟ್ 7 ರವರಗೂ ಆಷಾಢ ಮಾಸದ ವಿಶೇಷ ಪೂಜೆ ನಡೆಯಲಿದೆ.