ಮುಂಬೈ, ಜು. 15 (DaijiworldNews/AK): ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಜನ್ಮ ದಿನಾಚರಣೆಯನ್ನು ಈಗ ಸರ್ಕಾರಿ ಮಟ್ಟದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಮಹಾನ್ ವ್ಯಕ್ತಿಗಳ ಅಧಿಕೃತ ಜನ್ಮ ದಿನಾಚರಣೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕುರಿತು ಸರ್ಕಾರದಿಂದ ಇಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಹಿರಿಯ ಎನ್ಸಿಪಿ ನಾಯಕರಾದ ಹಸನ್ ಮುಶ್ರಿಫ್ ಮತ್ತು ಛಗನ್ ಭುಜಬಲ್ ಅವರು ಮುಖ್ಯಮಂತ್ರಿಯವರಿಗೆ ಈ ಕುರಿತು ಬೇಡಿಕೆಯನ್ನು ಇಟ್ಟಿದ್ದರು. ಅವರ ಬೇಡಿಕೆಗೆ ಒಪ್ಪಿರುವ ಸರ್ಕಾರ 6 ತಿಂಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಹಾರಾಷ್ಟ್ರದ ಅಭಿವೃದ್ಧಿಗೆ ನೀಡಿದ ಅಭೂತಪೂರ್ವ ಕೊಡುಗೆಗೆ ಗೌರವವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಜಿತ್ ಪವಾರ್ ಅವರ ಮೊದಲ ಜನ್ಮ ದಿನಾಚರಣೆಯನ್ನು ಜುಲೈ 22ರಂದು ರಾಜ್ಯಾದ್ಯಂತ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುವುದು.
ಜುಲೈ 22ರಂದು ಸಚಿವಾಲಯ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ದಾದಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಿವೆ. ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜುಗಳಿಗೂ ಈ ಆದೇಶವನ್ನು ಕಡ್ಡಾಯಗೊಳಿಸಲಾಗಿದೆ. ಅಜಿತ್ ಪವಾರ್ ಅವರ ಜೀವನ ಪ್ರಯಾಣವನ್ನು ಆಧರಿಸಿದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ಅಲ್ಲಿ ಆಯೋಜಿಸಲಾಗುವುದು.
ಅಜಿತ್ ಪವಾರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಮತ್ತು ಜಲಸಂಪನ್ಮೂಲ ಸಚಿವರಂತಹ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಕೆಲಸದ ಶಿಸ್ತು, ಆಡಳಿತದ ಮೇಲಿನ ಬಿಗಿ ಹಿಡಿತ, ಬೆಳಿಗ್ಗೆ ಬೇಗನೆ ಕೆಲಸ ಪ್ರಾರಂಭಿಸುವ ವಿಶಿಷ್ಟ ವಿಧಾನ ಮತ್ತು ‘ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ’ ಎಂಬ ಅವರ ಖ್ಯಾತಿ ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದೆ.
ಜನವರಿ 28ರಂದು ನಡೆದ ವಿಮಾನ ಅಪಘಾತದ ನಂತರ ಅಜಿತ್ ಪವಾರ್ ದುರಂತವಾಗಿ ಮೃತಪಟ್ಟಿದ್ದರು. ಅವರ ಮರಣದ ನಂತರ, ಇಡೀ ಮಹಾರಾಷ್ಟ್ರ ಆಘಾತಕ್ಕೊಳಗಾಯಿತು.