ಮುಂಬೈ, ಜು. 15 (DaijiworldNews/AA): ನ್ಯಾಯಯುತವಾಗಿದ್ದರೆ ಯಾವುದೇ ಮಸೂದೆಗೆ ನಮ್ಮ ವಿರೋಧವಿಲ್ಲ ಎಂದು ಸಮಾಜವಾದಿ ಶರದ್ ಪವಾರ್ ಪಕ್ಷದ ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯ ವಿವರಗಳನ್ನು ಎನ್ಸಿಪಿ ಬಹಿರಂಗ ಪಡಿಸಿದ ಅವರು, "ತಮ್ಮೊಂದಿಗೆ ಶಿವಸೇನೆ ಸಂಸದ ಹಾಗೂ ಲೋಕಸಭೆಯ ಗುಂಪಿನ ನಾಯಕ ಅರವಿಂದ್ ಸಾವಂತ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ದೆಹಲಿಗೆ ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯ ಕುರಿತು ವಿವರಿಸಿದರು" ಎಂದರು.
"ಸಭೆಯಲ್ಲಿ ಅಮಿತ್ ಶಾ ಅವರು, ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು, ಪ್ರತಿ ರಾಜ್ಯದ ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.೫೦ರಷ್ಟು ಹೆಚ್ಚಿಸುವ ಪ್ರಸ್ತಾಪ ಮಾಡಿದ್ದಾರೆ" ಎಂದು ಹೇಳಿದರು.
"ಅಮಿತ್ ಶಾ ಅವರು ಈಗಾಗಲೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ನಾಯಕರೊಂದಿಗೂ ಪ್ರತ್ಯೇಕ ಸಭೆ ನಡೆಸಿದ್ದು, ಆ ಸಭೆಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಸಭೆಯಲ್ಲಿ ತಿಳಿಸಿದ್ದರು" ಎಂದು ನುಡಿದರು.