ನವದೆಹಲಿ, ಜು. 15 (DaijiworldNews/AK): ಪರಿಸರ ಹೋರಾಟಗಾರ ಹಾಗೂ ಶಿಕ್ಷಣತಜ್ಞ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಗತ್ಯವಿದ್ದರೆ ಬಲವಂತವಾಗಿ ಆಹಾರ ನೀಡುವಂತೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ನಲ್ಲಿಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ರಾಜೀನಾಮೆಗೆ ಆಗ್ರಹಿಸಿ ಕಳೆದ 18 ದಿನಗಳಿಂದ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಅವರ ಆರೋಗ್ಯ ವೇಗವಾಗಿ ಕುಸಿಯುತ್ತಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಅವರು ಇದುವರೆಗೆ ಸುಮಾರು 8.5 ಕೆ.ಜಿ ತೂಕ ಕಳೆದುಕೊಂಡಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಅರ್ಜಿಯಲ್ಲಿ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡುವಂತೆ ಕೋರಲಾಗಿದ್ದು, ವಾಂಗ್ಚುಕ್ ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಅಗತ್ಯ ಪರಿಸ್ಥಿತಿ ನಿರ್ಮಾಣವಾದರೆ ವೈದ್ಯರ ಸಲಹೆಯಂತೆ ಬಲವಂತವಾಗಿ ಆಹಾರ ನೀಡಲು ಅವಕಾಶ ಕಲ್ಪಿಸಬೇಕೆಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅರ್ಜಿಯನ್ನು ಬುಧವಾರ (ಜು.15) ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗಿದ್ದರೂ, ದೆಹಲಿ ಹೈಕೋರ್ಟ್ ಗುರುವಾರ (ಜು.16) ವಿಚಾರಣೆ ನಡೆಸುವುದಾಗಿ ಸೂಚಿಸಿದೆ. ಇದೇ ಸಮಯದಲ್ಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ನಾಳೆಯೊಳಗೆ ಉತ್ತರ ನೀಡುವಂತೆ ಹೈಕೋರ್ಟ್ ಸೂಚಿಸಿದೆ.