ಲಕ್ನೋ, ಜು. 15 (DaijiworldNews/TA): ನೊಯ್ಡಾದ ಮಾಮುರಾ ಗ್ರಾಮದಲ್ಲಿರುವ ನಾಲ್ಕು ಮಹಡಿಗಳ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ದಟ್ಟ ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದು, ಸುಮಾರು 50 ಕುಟುಂಬಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮಾಹಿತಿಯ ಪ್ರಕಾರ, ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಸಂಪೂರ್ಣ ಪಾರ್ಕಿಂಗ್ಗೆ ವ್ಯಾಪಿಸಿದೆ. ಅಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಚಾಲಿತ ವಾಹನ (EV) ಚಾರ್ಜ್ ಮಾಡುತ್ತಿದ್ದ ವೇಳೆ ಉಂಟಾದ ಸ್ಪಾರ್ಕ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಬೆಂಕಿ ಸಮೀಪದಲ್ಲಿದ್ದ ಪೆಟ್ರೋಲ್ ವಾಹನಗಳಿಗೂ ವ್ಯಾಪಿಸಿ ಅಗ್ನಿ ಅನಾಹುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಕಿಗಿಂತಲೂ ದಟ್ಟ ಹೊಗೆ ವೇಗವಾಗಿ ಮೇಲಿನ ಮಹಡಿಗಳಿಗೆ ಹರಡಿದ್ದರಿಂದ ಹಲವು ನಿವಾಸಿಗಳು ತಮ್ಮ ಮನೆಗಳಲ್ಲೇ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಏಳು ಅಗ್ನಿಶಾಮಕ ವಾಹನಗಳು, ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಹಾಗೂ ವಿಶೇಷ ರಕ್ಷಣಾ ಸಾಧನಗಳ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಸುಮಾರು 50 ಕುಟುಂಬಗಳನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಘಟನೆಯಲ್ಲಿ ಹೊಗೆ ಉಸಿರಾಡಿದ ಪರಿಣಾಮ ಗಂಭೀರ ಅಸ್ವಸ್ಥಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಬಹಿರಂಗವಾಗಿಲ್ಲ.
ಘಟನೆ ಸಂಬಂಧ ಫೇಸ್-3 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕ ಹಾಗೂ ಲೀಸ್ದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.