ಪುಣೆ, ಜು. 15 (DaijiworldNews/TA): ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣದಲ್ಲಿ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಸಾಕ್ಷಿಯಾದ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನ ಮುಂದೆ ಆಕಸ್ಮಿಕವಾಗಿ ಹಳಿಗೆ ಬಿದ್ದಿದ್ದ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ್ದು, ಈ ಸಾಹಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಹಿತಿಯ ಪ್ರಕಾರ, ವೃದ್ಧರು ಪಂಡರಪುರ ಯಾತ್ರೆಗಾಗಿ ಪುಣೆಯಿಂದ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿಗೆ ಬಿದ್ದಿದ್ದಾರೆ. ಅಷ್ಟರಲ್ಲೇ ರೈಲು ವೇಗವಾಗಿ ಸಮೀಪಿಸುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೆ ಸಿಬ್ಬಂದಿ ಕ್ಷಣವೂ ತಡ ಮಾಡದೆ ಹಳಿಗೆ ಇಳಿದು, ವೃದ್ಧರನ್ನು ಸುರಕ್ಷಿತವಾಗಿ ಪ್ಲಾಟ್ಫಾರ್ಮ್ ಕಡೆಗೆ ಎಳೆದು ತಂದಿದ್ದಾರೆ. ಕೆಲವೇ ಕ್ಷಣಗಳ ಬಳಿಕ ರೈಲು ಆ ಸ್ಥಳವನ್ನು ದಾಟಿದ್ದು, ಅವರ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.
ಈ ಸಂಪೂರ್ಣ ರಕ್ಷಣಾ ಕಾರ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲ್ವೆ ಸಿಬ್ಬಂದಿಯ ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.