ಬೆಂಗಳೂರು,ಜು. 04 (DaijiworldNews/AK): ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅನ್ನು ದುರ್ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಬಿಎಲ್ಒಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಆರಂಭವಾಗಿರುವ ಎಸ್ಐಆರ್ನಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡುತ್ತಿದೆ. ಎಸ್ಐಆರ್ ನಲ್ಲಿ ಅಧಿಕಾರಿಗಳು ಮನೆಮನೆಗೆ ಹೋಗಿ ಎನ್ಯೂಮರೇಷನ್ ಫಾರಂಗಳನ್ನು ನೀಡಬೇಕು. ಆದರೆ ಬಿಎಲ್ಒ ಗಳನ್ನು ಕಲ್ಯಾಣ ಮಂಟಪ, ಚೌಲ್ಟ್ರಿ, ಮಸೀದಿಗಳಲ್ಲಿ ಕುಳಿತು ನಮೂನೆಗಳನ್ನು ಹಂಚುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಮನವಿ ಸಲ್ಲಿಸುರುವುದಾಗಿ ಹೇಳಿದರು.
ಬಿಎಲ್ಒಗಳನ್ನು ಕೆಲವು ಶಾಸಕರು ತಮ್ಮ ಕಚೇರಿಯಲ್ಲಿ ಕೂರಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಅಧಿಕಾರಿಗಳ ಮೇಳೆ ಶಾಸಕರು ಒತ್ತಡ ಹೇರುತ್ತಿದ್ದಾರೆ. ಇದನ್ನೆಲ್ಲ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಎಲ್ಲೆಲ್ಲಿ ಈ ರೀತಿ ಎಸ್ಐಆರ್ ಎಡವಟ್ಟು ಆಗಿದೆ ಅಲ್ಲಿ ಹೊಸದಾಗಿ ಎಸ್ಐಆರ್ ಆರಂಭಿಸಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.
ಈಗಾಗಲೇ ಕೇಂದ್ರ ಚುನಾವಣಾ ಆಯೋಗದ ಎಸ್ಐಆರ್ ಜೊತೆಗೆ ಸಮಾನಾಂತರವಾಗಿ ಜಿಬಿಎ ವ್ಯಾಪ್ತಿಯಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ಎಸ್ಐಆರ್ ನಡೆಸಲಾಗುತ್ತಿದೆ. ಇದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಎಸ್ಐಆರ್ ಉದ್ದೇಶವನ್ನೇ ರಾಜ್ಯ ಸರ್ಕಾರ ಹಾಳುಗೆಡವಿದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚುತ್ತಿರುವ ಫಾರಂಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಫೊಟೊಗಳನ್ನು ಹಾಕಿದ್ದಾರೆ. ಇದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ ಎಂದರು.
ಎಸ್ಐಆರ್ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ವಿಡಿಯೊ ಕಾನ್ಫರೆನ್ಸ್ ಮಾಡಿ ಸರಿಯಾದ ರೀತಿ ಮಾಡಿ ಎಂದು ತಾಕೀತು ಮಾಡಿದ್ದರೂ ಪಾಲಿಸಲಾಗುತ್ತಿಲ್ಲ. ನಮ್ಮ ದೂರಿಗೆ ಸ್ಪಂದಿಸಿರುವ ಆಯೋಗ ಸರಿಪಡಿಸುವ ಭರವಸೆ ನೀಡಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಕತ್ತೆಗಳೇ ಕಾರಣ
ರಾಜ್ಯದಲ್ಲಿನ ಎಸ್ಐಆರ್ ದುರ್ಬಳಕೆಗೆ ಕಾಂಗ್ರೆಸ್ ಕತ್ತೆಗಳೇ ಕಾರಣ. ಕೇಂದ್ರ ಚುನಾವಣಾ ಆಯೋಗವು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಕತ್ತೆಗಳು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟವೆ. ಈ ಕತ್ತೆಗಳೇ ಎಸ್ಐಆರ್ ಅನ್ನು ಹಾಳುಗೆಡವುತ್ತಿವೆ. ಬಿಎಲ್ಎ ಗಳ ಗಮನಕ್ಕೆ ಬರದಂತೆ ಶಾಸಕರ ಕಚೇರಿಯಲ್ಲಿ ಬಿಎಲ್ಒಗಳು ಕುಳಿತರೆ ಏನೂ ಮಾಡಲಾಗದು. ಅಧಿಕಾರಿಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು. ಕೆಲವು ಕಡೆ ಫಾರಂಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳಿಂದ ಕಸಿದುಕೊಂಡು ಹೋಗಿ ಹಂಚುತ್ತಿದ್ದಾರೆ ಎಂದು ದೂರಿದರು. ‘