ಕೊಡಗು, ಜು. 04 (DaijiworldNews/TA): ಬಡತನ ಯಶಸ್ಸಿಗೆ ಅಡ್ಡಿಯಲ್ಲ, ದೃಢಸಂಕಲ್ಪ ಮತ್ತು ಪರಿಶ್ರಮವಿದ್ದರೆ ವಿಶ್ವ ಮಟ್ಟದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಕೊಡಗಿನ ಯುವಕ ರಿಯಾಜ್ ನಜೀರ್ ಜೀವಂತ ಉದಾಹರಣೆಯಾಗಿದ್ದಾರೆ. ಒಂದು ಕಾಲದಲ್ಲಿ ಸೈಕಲ್ ಖರೀದಿಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬೆಳೆದಿದ್ದ ಅವರು, ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಹತ್ವಾಕಾಂಕ್ಷೆಯ ರಾಷ್ಟ್ರೀಯ ರೈಲು ಯೋಜನೆಯ ಮೊದಲ ಲೋಕೋ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ಯುಎಇಯ ಮೊದಲ ರಾಷ್ಟ್ರೀಯ ಪ್ಯಾಸೆಂಜರ್ ರೈಲು ಸೇವೆಯಾದ 'ಇತಿಹಾದ್ ರೈಲು' ತನ್ನ ಮೊದಲ ಐತಿಹಾಸಿಕ ಸಂಚಾರವನ್ನು ಯಶಸ್ವಿಯಾಗಿ ಆರಂಭಿಸಿದ್ದು, ಫುಜೈರಾದಿಂದ ಅಬುಧಾಬಿವರೆಗೆ ಸಂಚರಿಸಿದ ಈ ರೈಲಿಗೆ ಮೊದಲ ಬಾರಿಗೆ ಸಾರಥ್ಯ ವಹಿಸಿದ ಗೌರವ ಕೊಡಗಿನ ರಿಯಾಜ್ ನಜೀರ್ ಅವರಿಗೆ ಸಲ್ಲಿದೆ. ಈ ಸಾಧನೆಯ ಮೂಲಕ ಅವರು ಕರ್ನಾಟಕ ಹಾಗೂ ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ.
ಕೊಡಗು ಜಿಲ್ಲೆಯ ಮಾದಾಪುರ ಮೂಲದ ರಿಯಾಜ್ ನಜೀರ್ ಅವರು ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದವರು. ಅವರ ಪೋಷಕರಾದ ಹಾಜಿ ನಜೀರ್ ಮತ್ತು ರೆಪ್ಪತ್ ದಂಪತಿ ಪ್ರಸ್ತುತ ಶುಂಠಿಕೊಪ್ಪದಲ್ಲಿ ವಾಸವಾಗಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೇ ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಮುನ್ನಡೆದ ರಿಯಾಜ್, ತಮ್ಮ ಪರಿಶ್ರಮ ಮತ್ತು ಪ್ರತಿಭೆಯಿಂದ ಇಂದು ಜಾಗತಿಕ ಮಟ್ಟದ ರೈಲ್ವೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಮಗನಿಗೆ ಸೈಕಲ್ ಕೊಡಿಸಲು ಸಾಧ್ಯವಾಗದಿದ್ದ ಕುಟುಂಬಕ್ಕೆ, ಇಂದು ಮಗ ವಿದೇಶದ ಐತಿಹಾಸಿಕ ರೈಲು ಯೋಜನೆಗೆ ಮೊದಲ ಲೋಕೋ ಪೈಲಟ್ ಆಗಿರುವುದು ಹೆಮ್ಮೆ ಮತ್ತು ಸಂತಸದ ಕ್ಷಣವಾಗಿದೆ. ಯುಎಇ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇತಿಹಾದ್ ರೈಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ರಾಷ್ಟ್ರೀಯ ರೈಲು ಸೇವೆಯಾಗಿದೆ. ಈ ಯೋಜನೆಯ ಉದ್ಘಾಟನಾ ಸಂಚಾರಕ್ಕೆ ಲೋಕೋ ಪೈಲಟ್ ಆಗಿ ರಿಯಾಜ್ ಅವರನ್ನು ಆಯ್ಕೆ ಮಾಡಿರುವುದು ಅವರ ವೃತ್ತಿಪರ ಅನುಭವ ಮತ್ತು ಸಾಮರ್ಥ್ಯಕ್ಕೆ ಸಂದ ಗೌರವವೆಂದು ಪರಿಗಣಿಸಲಾಗಿದೆ.
ರಿಯಾಜ್ ನಜೀರ್ ಅವರಿಗೆ ಜಾಗತಿಕ ರೈಲು ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಸದೇನಲ್ಲ. ಈ ಹಿಂದೆ ಕತಾರ್ ಮೆಟ್ರೋ ಹಾಗೂ ಕತಾರ್ ಟ್ರಾಮ್ ಸೇವೆಗಳು ಆರಂಭವಾದ ವೇಳೆ ಮೊದಲ ಅಧಿಕೃತ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಅವರು, ಇದೀಗ ಯುಎಇಯ ರಾಷ್ಟ್ರೀಯ ರೈಲು ಸೇವೆಯ ಮೊದಲ ಲೋಕೋ ಪೈಲಟ್ ಆಗುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬಡತನವನ್ನು ಮೀರಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ವಿಶ್ವಮಟ್ಟದ ಸಾಧನೆ ಮಾಡಿದ ರಿಯಾಜ್ ನಜೀರ್ ಅವರ ಯಶೋಗಾಥೆ ಇಂದು ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದೆ. ಕೊಡಗಿನ ಈ ಯುವಕನ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.