ಕೊಲ್ಕತ್ತಾ, ಜು. 04 (DaijiworldNews/TA): ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಪಕ್ಷದ ಅಧಿಕೃತ ಸಹಿದಾರರ ಜವಾಬ್ದಾರಿ ಸೇರಿದಂತೆ ಸಂಘಟನೆಯ ಎಲ್ಲ ಹೊಣೆಗಾರಿಕೆಗಳಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಚಂದ್ರಿಮಾ ಭಟ್ಟಾಚಾರ್ಯ ಅವರು ಟಿಎಂಸಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿಯೂ ಗುರುತಿಸಿಕೊಂಡಿದ್ದರು. ಹೀಗಾಗಿ ಅವರ ರಾಜೀನಾಮೆ ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಇತ್ತೀಚಿನ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಬಳಿಕ ಟಿಎಂಸಿಯಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಕೆಲ ನಾಯಕರು ಪಕ್ಷದ ಕಾರ್ಯವೈಖರಿಯ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಯ ನಡುವೆ ಚಂದ್ರಿಮಾ ಅವರ ರಾಜೀನಾಮೆ ಪಕ್ಷದ ಸಂಘಟನೆಗೆ ಮತ್ತೊಂದು ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ. ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಚಂದ್ರಿಮಾ ಭಟ್ಟಾಚಾರ್ಯ ಅವರಿಗೆ ಈ ಬಾರಿ ಸೋಲು ಎದುರಾಗಿತ್ತು. ಈ ಸೋಲಿನ ಬಳಿಕ ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಟಿಎಂಸಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗುತ್ತಿದ್ದು, ಕೆಲ ನಾಯಕರು ಪಕ್ಷದ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿರುವುದು ಗಮನ ಸೆಳೆಯುತ್ತಿದೆ. ಹಿರಿಯ ನಾಯಕರು ಹಾಗೂ ಜನಪ್ರತಿನಿಧಿಗಳ ನಡೆ ಪಕ್ಷದ ಮುಂದಿನ ರಾಜಕೀಯ ದಿಕ್ಕಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಂದ್ರಿಮಾ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳದ ಹಿರಿಯ ರಾಜಕಾರಣಿಯಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭೂ ಸುಧಾರಣೆ ಹಾಗೂ ನಿರಾಶ್ರಿತರ ಪುನರ್ವಸತಿ ಸೇರಿದಂತೆ ಹಲವು ಇಲಾಖೆಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಪದವೀಧರರಾದ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ವಕೀಲರಾಗಿ ಸೇವೆ ಸಲ್ಲಿಸಿದ್ದರು. ದಮ್ ದಮ್ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಟಿಎಂಸಿಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದರು. ಚಂದ್ರಿಮಾ ಭಟ್ಟಾಚಾರ್ಯ ಅವರ ರಾಜೀನಾಮೆಯ ಕುರಿತು ಟಿಎಂಸಿ ನಾಯಕತ್ವದಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ನಿರೀಕ್ಷಿಸಲಾಗಿದ್ದು, ಮುಂದಿನ ಬೆಳವಣಿಗೆಗಳು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಕುತೂಹಲ ಮೂಡಿಸಿವೆ.