ಬೆಂಗಳೂರು, ಜು. 04 (DaijiworldNews/TA): ರಾಜಧಾನಿ ಬೆಂಗಳೂರಿನ ರಾಜಾಜಿನಗರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಮೆಟ್ರೋ ಹಳಿಗೆ ಜಿಗಿದ ಪರಿಣಾಮ ಹಸಿರು ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ.

ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 12:25 ಗಂಟೆ ವೇಳೆಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಏಕಾಏಕಿ ಹಳಿಗೆ ಜಿಗಿದಿದ್ದಾಳೆ. ಘಟನೆ ಗಮನಿಸಿದ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತು ನಿಗದಿತ ತುರ್ತು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಹಳಿಯಲ್ಲಿದ್ದ ಯುವತಿಯನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ರಕ್ಷಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಘಟನೆಯ ಪರಿಣಾಮವಾಗಿ ಹಸಿರು ಮಾರ್ಗದ ಮೆಟ್ರೋ ರೈಲು ಸಂಚಾರ ಸುಮಾರು 10 ನಿಮಿಷಗಳ ಕಾಲ ವಿಳಂಬಗೊಂಡಿತು. ಬಳಿಕ ಹಳಿ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿದ ಅಧಿಕಾರಿಗಳು, ಮಧ್ಯಾಹ್ನ 12:34 ಗಂಟೆಗೆ ಮೆಟ್ರೋ ಸಂಚಾರವನ್ನು ಎಂದಿನಂತೆ ಪುನರಾರಂಭಿಸಿದರು. ಯುವತಿಯ ಆರೋಗ್ಯ ಸ್ಥಿರವಾಗಿದ್ದು, ಆಕೆ ಹಳಿಗೆ ಜಿಗಿಯಲು ಕಾರಣವೇನು ಎಂಬುದರ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೇ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿವೆ. ಕೆಲವು ತಿಂಗಳುಗಳ ಹಿಂದೆ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ಡಿ ಗ್ರೂಪ್ ನೌಕರರೊಬ್ಬರು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆಗಲೂ ಮೆಟ್ರೋ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ನಿಲ್ದಾಣಗಳಲ್ಲಿ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.