ನವದೆಹಲಿ, ಜು. 04 (DaijiworldNews/AA): ಸಿನಿಮಾ ಹಾಗೂ ವೆಬ್ಸಿರೀಸ್ಗಳ ಪೈರಸಿ ತಡೆಯುವ ಉದ್ದೇಶದಿಂದ ಕಾನೂನುಬಾಹಿರ ಸಿನಿಮಾ, ಒಟಿಟಿ ಕಂಟೆಂಟ್ ವಿರುದ್ಧ ಕ್ರಮ ಕೈಗೊಂಡು, ಆ ವರದಿಯನ್ನು 15 ದಿನದೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ ನೋಟಿಸ್ ನೀಡಿದೆ.

ಟೆಲಿಗ್ರಾಂನಲ್ಲಿ ಹರಿದಾಡುತ್ತಿರುವ ಪೈರೇಟೆಡ್ ಚಲನಚಿತ್ರಗಳು ಮತ್ತು ಒಟಿಟಿ ಕಂಟೆಂಟ್ಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ. ಟೆಲಿಗ್ರಾಂನ ವಿವಿಧ ಚಾನೆಲ್ಗಳು ಮತ್ತು ಗುಂಪುಗಳ ಮೂಲಕ ಹೊಸ ಚಲನಚಿತ್ರಗಳು, ಒಟಿಟಿ ವೇದಿಕೆಗಳ ವಿಷಯಗಳು ಹಾಗೂ ಇತರೆ ಆಡಿಯೋ-ವಿಜುವಲ್ ಕೃತಿಗಳು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪೈರಸಿ ತಡೆಗೆ ಟೆಲಿಗ್ರಾಂ ಯಾವ ಕ್ರಮಗಳನ್ನು ಕೈಗೊಂಡಿದೆ? ಮುಂದಿನ ದಿನಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಯಾವ ವ್ಯವಸ್ಥೆ ರೂಪಿಸಲಿದೆ ಎಂಬುದನ್ನು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ತಿಳಿಸಿದೆ. ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.