ನವದೆಹಲಿ, ಜು. 04 (DaijiworldNews/AA): ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT), ಜಮಾತ್-ಉದ್-ದಾವಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ 23 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೆಕ್ಷನ್ 35ರ ಅಡಿಯಲ್ಲಿ 'ಘೋಷಿತ ಭಯೋತ್ಪಾದಕರು' ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಭಾರತದ ವಿವಿಧ ಭಾಗಗಳಲ್ಲಿ ನಡೆದ ಭೀಕರ ಉಗ್ರರ ದಾಳಿ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ಈ 23 ಮಂದಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಅಧಿಕೃತವಾಗಿ ಉಗ್ರರೆಂದು ಘೋಷಿಸಿದ 23 ಜನರ ಪೈಕಿ 17 ಜನ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಉಳಿದ 6 ಮಂದಿ ಭಾರತೀಯ ಮೂಲದ ಉಗ್ರರಾಗಿದ್ದಾರೆ.
ಈ ಉಗ್ರರು ಕೇವಲ ದಾಳಿಯಷ್ಟೇ ಅಲ್ಲದೆ, ಭಾರತದೊಳಗೆ ನುಸುಳುವಿಕೆ, ಭಯೋತ್ಪಾದನೆಗೆ ಯುವಕರ ನೇಮಕಾತಿ, ತರಬೇತಿ, ಉಗ್ರರಿಗೆ ಆರ್ಥಿಕ ನೆರವು, ಶಸ್ತ್ರಾಸ್ತ್ರ ಪೂರೈಕೆ ಮತ್ತು ಇತ್ತೀಚಿನ ದಿನಗಳಲ್ಲಿ ಡ್ರೋನ್ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು. ಪ್ರಮುಖವಾಗಿ 2022ರ ಏಪ್ರಿಲ್ 22ರಂದು ಜಮ್ಮುವಿನ ಸುಂಜ್ವಾನ್ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿ ಹಾಗೂ 2016ರ ನವೆಂಬರ್ 29ರಂದು ಜಮ್ಮುವಿನ ನಗ್ರೋಟಾ ಸೇನಾ ಶಿಬಿರದ ಮೇಲೆ ನಡೆದ ಭೀಕರ ಉಗ್ರರ ದಾಳಿಗಳಲ್ಲಿ ಈ ವ್ಯಕ್ತಿಗಳು ಪ್ರಮುಖ ಸಂಚು ರೂಪಿಸಿದ್ದರು ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಈ 23 ಜನರ ಹೆಸರುಗಳನ್ನು ಅಧಿಕೃತವಾಗಿ ಭಯೋತ್ಪಾದಕರೆಂದು ಘೋಷಿಸಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ತಕ್ಷಣವೇ ಇವರ ಬ್ಯಾಂಕ್ ಖಾತೆಗಳನ್ನು ಮತ್ತು ಆರ್ಥಿಕ ವಹಿವಾಟುಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಶಸ್ತ್ರಾಸ್ತ್ರಗಳ ಖರೀದಿಗೆ ನಿಷೇಧ ಹೇರಬಹುದು. ಜೊತೆಗೆ ಭಾರತದಲ್ಲಿ ಇವರಿಗಿರುವ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.