ಮುಂಬೈ, ಜು. 04 (DaijiworldNews/TA): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಶನಿವಾರ ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಶುಕ್ರವಾರದಿಂದ ಲಘು ಜ್ವರ, ಮೈಕೈ ನೋವು ಹಾಗೂ ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆ ಮೂಲಗಳ ಪ್ರಕಾರ, ಶಿಂಧೆ ಅವರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಸಾರ್ವಜನಿಕರು ಹಾಗೂ ಬೆಂಬಲಿಗರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜ್ವರ ಮತ್ತು ಸುಸ್ತಿನ ನಿಖರ ಕಾರಣ ಪತ್ತೆಹಚ್ಚಲು ವೈದ್ಯರ ತಂಡವು ವಿವಿಧ ರಕ್ತ ಪರೀಕ್ಷೆಗಳನ್ನು ನಡೆಸುತ್ತಿದ್ದು, ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಆದರೆ, ಈವರೆಗೆ ಆಸ್ಪತ್ರೆ ಅಥವಾ ಉಪಮುಖ್ಯಮಂತ್ರಿಗಳ ಕಚೇರಿಯಿಂದ ಯಾವುದೇ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕಾಗಿರುವ ಹಿನ್ನೆಲೆ, ವೈರಲ್ ಜ್ವರ ಮತ್ತು ಇತರ ಸಾಂಕ್ರಾಮಿಕ ಸೋಂಕುಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ ಶಿಂಧೆ ಅವರ ಆರೋಗ್ಯದಲ್ಲಿಯೂ ತಾತ್ಕಾಲಿಕ ಸಮಸ್ಯೆ ಉಂಟಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಶಿವಸೇನೆಯ ಹಿರಿಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆಯ ಪ್ರಗತಿ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಶಿಂಧೆ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ಅಧಿಕೃತ ಕರ್ತವ್ಯಗಳಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.