ನವದೆಹಲಿ, ಜು. 04 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದ್ದು, ಈ ಪರೀಕ್ಷೆಯನ್ನು ಒಂದು ಬಾರಿ ಉತ್ತೀರ್ಣರಾಗುವುದೇ ಕಷ್ಟಸಾಧ್ಯ. ಹೀಗಿರುವಾಗ ಎರೆಡೆರೆಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿನ್ನಿಯಾ ಅರೋರಾ ಅವರ ಯಶೋಗಾಥೆ ಇದು.

ಹರಿಯಾಣದ ರೋಹ್ಟಕ್ನ ಆಡಳಿತಾಧಿಕಾರಿಗಳ ಕುಟುಂಬದಿಂದ ಬಂದಿರುವ ಜಿನ್ನಿಯಾ, ನವದೆಹಲಿಯಲ್ಲಿ ಬೆಳೆದವರು. ಅವರ ಪೋಷಕರು ಇಬ್ಬರೂ ನಿವೃತ್ತ ಸರ್ಕಾರಿ ಅಧಿಕಾರಿಗಳಾಗಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಪದವೀಧರೆಯಾಗಿರುವ ಜಿನ್ನಿಯಾ, 2022 ರಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಐಜಿಎನ್ಒಯು ನಿಂದ ಸ್ನಾತಕೋತ್ತರ ಡಿಪ್ಲೊಮಾವನ್ನೂ ಪೂರೈಸಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ಜಿನ್ನಿಯಾ ಅವರು 'ರಾಜಕೀಯ ವಿಜ್ಞಾನ ಮತ್ತು ಅಂತರಾಷ್ಟ್ರೀಯ ಸಂಬಂಧಗಳು' ವಿಷಯವನ್ನು ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. 2024ರಲ್ಲಿ ಮೋರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು156ನೇ ಅಖಿಲ ಭಾರತ ರ್ಯಾಂಕ್ ಪಡೆದು ಐಪಿಎಸ್ಗೆ ಸೇರ್ಪಡೆಗೊಂಡಿದ್ದರು.
ಆದರೆ ಜಿನ್ನಿಯಾ ಅವರು ಹಿಂದಿನ ಯಶಸ್ಸಿಗೆ ತೃಪ್ತಿ ಪಡದೆ, ಸೇವೆಯಲ್ಲಿರುವಾಗಲೇ ತಮ್ಮ ಸಿದ್ಧತೆಯನ್ನು ಮುಂದುವರಿಸಿ, 2025ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಪ್ರಯತ್ನದಲ್ಲಿ ಅವರು 6ನೇ ಅಖಿಲ ಭಾರತ ರ್ಯಾಂಕ್ ಗಳಿಸುತ್ತಾರೆ. ಅವರ ಈ ಸಾಧನೆಯು ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.