ನವದೆಹಲಿ, ಜು. 03 (DaijiworldNews/AA): ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಕೊನೆಗಾಣಿಸಲು ಪಾಕಿಸ್ತಾನ ಸೂಕ್ತ ಕ್ರಮಗಳನ್ನು ಕೈಗೊಳ್ಳುವವರೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಅಮಾನತಿನಲ್ಲಿಯೇ ಇರಲಿದೆ ಎಂದು ಭಾರತ ಪ್ರತಿಪಾದಿಸಿದೆ.

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಡಿಯಲ್ಲಿ ತನಗೆ ಸಿಗಬೇಕಾದ ನೀರಿನ ಪಾಲಿಗೆ ಧಕ್ಕೆ ತರದಂತೆ ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡಿದ ಎಚ್ಚರಿಕೆಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮತ್ತೊಮ್ಮೆ ಹೇಳಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಈ ಒಪ್ಪಂದದ ಕುರಿತು ಭಾರತದ ನಿಲುವು ಬದಲಾಗಿಲ್ಲ. ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವು ಸ್ಥಿರವಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಪ್ರತಿಕ್ರಿಯೆಯಾಗಿ ಸಿಂಧೂ ಜಲ ಒಪ್ಪಂದ ಅಮಾನತ್ತಿನಲ್ಲಿದೆ. ಪಾಕಿಸ್ತಾನವು ನಂಬಿಕಸ್ಥ ಹಾಗೂ ಎಂದಿಗೂ ಬದಲಾಗದ ರೀತಿಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ತ್ಯಜಿಸಬೇಕು" ಎಂದು ಹೇಳಿದ್ದಾರೆ.
ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಸಿಗಬೇಕಾದ ನೀರಿನ ಪಾಲನ್ನು ಕಸಿದುಕೊಳ್ಳಲು ಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂದು ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯವು ಈ ಪ್ರತಿಕ್ರಿಯೆ ನೀಡಿದೆ.