ನವದೆಹಲಿ, ಜು. 03 (DaijiworldNews/TA): ತಾಯಿಯ ಪ್ರೀತಿ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಮೂಕ ಪ್ರಾಣಿಗಳಲ್ಲೂ ಅದೇ ಮಮತೆ ಕಾಣಸಿಗುತ್ತದೆ ಎಂಬುದನ್ನು ಸಾರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಕರು ಮಲಗಿರುವ ಸ್ಥಳವನ್ನು ತೋರಿಸಲು ಹಸುವೊಂದು ತನ್ನ ಮಾಲೀಕನನ್ನೇ ಕರೆದುಕೊಂಡು ಹೋಗಿರುವ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ.

ಈ ವೀಡಿಯೋವನ್ನು ರವಿ ಚಂದ್ರ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ, ಕೆಲವು ದಿನಗಳ ಹಿಂದಷ್ಟೇ ಕರು ಹಾಕಿದ್ದ ಹಸು ಮೇಯಲು ಹೋಗಿ ಮರಳಿ ಬಂದ ಬಳಿಕ ತನ್ನ ಮಾಲೀಕನನ್ನು ಹಿಂಬಾಲಿಸುವಂತೆ ಸೂಚಿಸುತ್ತದೆ. ಹಸುವಿನ ವರ್ತನೆ ಗಮನಿಸಿದ ಮಾಲೀಕ ಅದರ ಹಿಂದೆ ಸಾಗುತ್ತಾರೆ. ಕೊನೆಗೆ ಹಸು ಹುಲ್ಲಿನ ದಟ್ಟ ಪೊದೆಯೊಂದರ ಬಳಿ ನಿಂತು, ಅದರೊಳಗೆ ಸುರಕ್ಷಿತವಾಗಿ ಮಲಗಿದ್ದ ತನ್ನ ಕರುವನ್ನು ತೋರಿಸುತ್ತದೆ.
ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತಾಯಿ ಹಸುವಿನ ಕಾಳಜಿ ಮತ್ತು ಮಮತೆಯನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. "ಮೂಕ ಪ್ರಾಣಿಗಳಿಗೂ ಭಾವನೆಗಳಿವೆ", "ತಾಯಿಯ ಪ್ರೀತಿ ಎಲ್ಲ ಜೀವಿಗಳಲ್ಲೂ ಒಂದೇ", "ಈ ದೃಶ್ಯ ನಿಜಕ್ಕೂ ಹೃದಯ ಸ್ಪರ್ಶಿಸಿದೆ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ತಾಯಿ ಮತ್ತು ಕಂದಮ್ಮನ ನಡುವಿನ ಬಾಂಧವ್ಯವನ್ನು ಮನಮುಟ್ಟುವ ರೀತಿಯಲ್ಲಿ ತೋರಿಸುವ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.