ನವದೆಹಲಿ, ಜು. 03 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ನ್ಯೂಜಿಲೆಂಡ್ಗೆ ತಮ್ಮ ಮೊದಲ ಅಧಿಕೃತ ದ್ವಿಪಕ್ಷೀಯ ಪ್ರವಾಸ ಕೈಗೊಳ್ಳಲಿದ್ದು, ಕಳೆದ ನಾಲ್ಕು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಕುರಿತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತ-ನ್ಯೂಜಿಲೆಂಡ್ ಸಂಬಂಧದಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ವ್ಯಾಪಾರ ಹಾಗೂ ಕಾರ್ಯತಂತ್ರದ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಜುಲೈ 10ರಂದು ನ್ಯೂಜಿಲೆಂಡ್ಗೆ ಆಗಮಿಸಿ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರೊಂದಿಗೆ ಉಭಯ ದೇಶಗಳ ಹಿತಾಸಕ್ತಿಯ ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (FTA), ಹೂಡಿಕೆ, ಕೃಷಿ, ಆಹಾರ ಸಂಸ್ಕರಣೆ, ನವೀಕರಿಸಬಹುದಾದ ಇಂಧನ, ಶಿಕ್ಷಣ, ತಂತ್ರಜ್ಞಾನ, ರಕ್ಷಣಾ ಸಹಕಾರ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸಹಯೋಗ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ. ಇದೇ ವೇಳೆ ಹೊಸ ಒಪ್ಪಂದಗಳು ಮತ್ತು ಸಹಕಾರದ ಘೋಷಣೆಗಳಿಗೂ ವೇದಿಕೆ ಸಿದ್ಧವಾಗುವ ಸಾಧ್ಯತೆ ಇದೆ.
ಈ ವರ್ಷದ ಏಪ್ರಿಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಅಂತಿಮಗೊಂಡಿತ್ತು. ಈ ಒಪ್ಪಂದದಡಿ ನ್ಯೂಜಿಲೆಂಡ್ನ ಸುಮಾರು 95 ಶೇಕಡಾ ರಫ್ತು ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಹಂತ ಹಂತವಾಗಿ ತೆರವುಗೊಳಿಸಲು ಒಪ್ಪಿಕೊಂಡಿದೆ. ಈ ಬೆಳವಣಿಗೆಯಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ಆರ್ಥಿಕ ಸಹಕಾರ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದ್ದು, ಪ್ರಧಾನಿ ಮೋದಿ ಅವರ ಭೇಟಿ ಒಪ್ಪಂದದ ಅನುಷ್ಠಾನಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯದ ಪ್ರತಿನಿಧಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುವ ಸಾಧ್ಯತೆಯಿದೆ. ಅಲ್ಲಿನ ಭಾರತೀಯ ಸಮುದಾಯವು ಉಭಯ ದೇಶಗಳ ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ನ್ಯೂಜಿಲೆಂಡ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಇಂಡೋ-ಪೆಸಿಫಿಕ್ ಪ್ರದೇಶದ ಇತರೆ ರಾಷ್ಟ್ರಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ. ಈ ವಿದೇಶಿ ಪ್ರವಾಸವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ರಾಜತಾಂತ್ರಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.