ಬೆಂಗಳೂರು, ಜು. 03 (DaijiworldNews/TA): ಕರ್ನಾಟಕದಲ್ಲಿ ಅನಿವಾಸಿ ಭಾರತೀಯರ (ಎನ್ಆರ್ಐ) ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ, ಅದರ ಹೊಣೆಗಾರಿಕೆಯನ್ನು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರಿಗೆ ನೀಡಬೇಕು ಎಂದು ಕೆಪಿಸಿಸಿ ಅನಿವಾಸಿ ಭಾರತೀಯ ಸಮಿತಿಯ ಸಂಯೋಜಕ ಹಾಗೂ ಅನಿವಾಸಿ ಸಮಾಜಸೇವಕ ಅನ್ವರ್ ಮಾಣಿಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎನ್ಆರ್ಐ ಇಲಾಖೆಗೆ ಪ್ರತ್ಯೇಕ ಸಚಿವ ಸ್ಥಾನ ಸೃಷ್ಟಿಸಿ, ಅದರ ಜವಾಬ್ದಾರಿಯನ್ನು ಆರತಿ ಕೃಷ್ಣ ಅವರಿಗೆ ನೀಡುವಂತೆ ಅನಿವಾಸಿ ಭಾರತೀಯರ ವಲಯದಲ್ಲಿ ಒತ್ತಾಯ ಹೆಚ್ಚಾಗಿದೆ.
ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಭರವಸೆಯನ್ನು ಸರ್ಕಾರ ಈಗಾಗಲೇ ನೀಡಿದ್ದು, ಈ ಇಲಾಖೆ ಎನ್ಆರ್ಐಗಳು ಮತ್ತು ರಾಜ್ಯ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಈ ಭರವಸೆಯನ್ನು ಉಲ್ಲೇಖಿಸಲಾಗಿತ್ತು.
ಡಾ. ಆರತಿ ಕೃಷ್ಣ ಅವರು ಈ ಹಿಂದೆ ಕರ್ನಾಟಕ ಅನಿವಾಸಿ ಭಾರತೀಯರ ಸಮಿತಿ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ವಿದೇಶದಲ್ಲಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಅವರು ಮಹತ್ವದ ಸೇವೆ ಸಲ್ಲಿಸಿದ್ದರು ಎಂದು ಅನ್ವರ್ ಮಾಣಿಲ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಾಗಿರುವ ಎನ್ಆರ್ಐ ಸಚಿವಾಲಯ ಕೇವಲ ಘೋಷಣೆಯಾಗಿಯೇ ಉಳಿಯದೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಬೇಕು. ಈ ಸಚಿವಾಲಯದ ಮೂಲಕ ಕರ್ನಾಟಕಕ್ಕೆ ಜಾಗತಿಕ ಹೂಡಿಕೆ, ಉದ್ಯೋಗ ಹಾಗೂ ವಿವಿಧ ಅಭಿವೃದ್ಧಿ ಅವಕಾಶಗಳನ್ನು ಸೆಳೆಯುವ ಕೆಲಸ ನಡೆಯಬೇಕು. ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ ಅವರನ್ನೇ ಸಚಿವೆಯನ್ನಾಗಿ ನೇಮಿಸಿದರೆ ಇಲಾಖೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತದೆ ಎಂದು ಅನ್ವರ್ ಮಾಣಿಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.