ನವದೆಹಲಿ, ಜು. 03 (DaijiworldNews/TA): ದುಬಾರಿ ಆಭರಣಗಳು, ಭಾರೀ ಮೇಕಪ್ ಮತ್ತು ವೈಭವದ ಮದುವೆಗಳ ನಡುವೆಯೇ ಕೇರಳದ ವಧುವೊಬ್ಬರ ಸರಳ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಮದುವೆಯ ದಿನ ಒಂದೇ ಒಂದು ಗ್ರಾಂ ಚಿನ್ನ ಅಥವಾ ಕೃತಕ (ಆರ್ಟಿಫಿಷಿಯಲ್) ಆಭರಣವನ್ನೂ ಧರಿಸದೇ ಮಂಟಪಕ್ಕೇರಿದ ವಧುವಿನ ವಿಡಿಯೊ ಇದೀಗ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯಯೋದಲ್ಲಿ ವಧು ಕೆಂಪು ಬಣ್ಣದ ಸೀರೆಯೊಂದಿಗೆ ಹೊಂದಿಕೆಯಾಗುವ ವರ್ಕ್ ಬ್ಲೌಸ್ ಹಾಗೂ ದುಪಟ್ಟಾ ಧರಿಸಿ, ಸರಳ ಹೇರ್ಸ್ಟೈಲ್ ಮತ್ತು ಮೇಕಪ್ನೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಕುತ್ತಿಗೆ ಹಾರ, ಕಿವಿಯೋಲೆ, ಬಳೆ ಸೇರಿದಂತೆ ಯಾವುದೇ ರೀತಿಯ ಆಭರಣವನ್ನು ಧರಿಸಿಲ್ಲ. ಈ 'ನೋ ಗೋಲ್ಡ್, ನೋ ಜ್ಯುವೆಲ್ಲರಿ ವೆಡ್ಡಿಂಗ್' ಪರಿಕಲ್ಪನೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದು, ವಿಶೇಷವಾಗಿ ಯುವಜನರು ಈ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.
ವೀಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ಅನಗತ್ಯ ಖರ್ಚು ಮಾಡುವ ಬದಲು ಇಂತಹ ಸರಳ ಮದುವೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಟ್ರೆಂಡ್ಗಳೇ ಹೆಚ್ಚು ಜನರಿಗೆ ಪ್ರೇರಣೆಯಾಗಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆ, ಮದುವೆಗಳಲ್ಲಿ ಚಿನ್ನದ ಖರೀದಿ ಅನೇಕ ಕುಟುಂಬಗಳಿಗೆ ಹೊರೆಯಾಗುತ್ತಿದೆ. ಭಾರತೀಯ ವಿವಾಹಗಳಲ್ಲಿ, ವಿಶೇಷವಾಗಿ ಕೇರಳದ ಮುಸ್ಲಿಂ ಸಮುದಾಯದಲ್ಲಿ ವಧುವಿಗೆ ಹೆಚ್ಚಿನ ಪ್ರಮಾಣದ ಚಿನ್ನ ನೀಡುವುದು ಸಾಮಾನ್ಯ ಸಂಪ್ರದಾಯವಾಗಿದೆ.
ಇಂತಹ ಸಂದರ್ಭದಲ್ಲಿ ಯಾವುದೇ ಚಿನ್ನದ ಆಭರಣ ಧರಿಸದೇ ಮದುವೆಯಾಗಿರುವ ವಧುವಿನ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಬೆಂಬಲ ನೀಡಿದ ವಧುವಿನ ಪೋಷಕರು ಹಾಗೂ ವರನಿಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದುಬಾರಿ ವೆಚ್ಚದ ಮದುವೆಗಳಿಗಿಂತ ಸರಳತೆ, ಆರ್ಥಿಕ ಜವಾಬ್ದಾರಿ ಮತ್ತು ಅನಗತ್ಯ ಆಡಂಬರವನ್ನು ತೊರೆಯುವ ಇಂತಹ ಪ್ರಯತ್ನಗಳು ಸಮಾಜದಲ್ಲಿ ಉತ್ತಮ ಮಾದರಿಯಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ಈ ಮದುವೆ ವಿಡಿಯೊ ಇದೀಗ ಸಾವಿರಾರು ಮಂದಿ ಹಂಚಿಕೊಳ್ಳುತ್ತಿದ್ದು, "ಇಂತಹ ಟ್ರೆಂಡ್ಗಳೇ ಹೆಚ್ಚು ವೈರಲ್ ಆಗಬೇಕು" ಎಂಬುದು ನೆಟ್ಟಿಗರ ಒಕ್ಕೊರಲಿನ ಅಭಿಪ್ರಾಯವಾಗಿದೆ.