ಲಕ್ನೋ, ಜು. 02 (DaijiworldNews/AK): ಮಹಾರಾಷ್ಟ್ರಬಳಿಕ ಉತ್ತರ ಪ್ರದೇಶದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ವಂಚನೆ ಜಾಲವೊಂದು ಸಿಕ್ಕಿಬಿದ್ದಿದೆ. ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಶಿಕ್ಷಕರ ಅರ್ಹತಾ ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ. ಮೊದಲ ದಿನವಾದ ಇಂದು (ಗುರುವಾರ) ಪರೀಕ್ಷೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ರಾಜ್ಯದ 60 ಜಿಲ್ಲೆಗಳ 955 ಕೇಂದ್ರಗಳಲ್ಲಿ 6.84 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಎಐ-ಕಣ್ಗಾವಲು ಸೇರಿ ಕಠಿಣ ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಪರೀಕ್ಷೆಯನ್ನ ಪಾರದರ್ಶಕ ಮತ್ತು ದುಷ್ಕೃತ್ಯ-ಮುಕ್ತ ರೀತಿಯಲ್ಲಿ ನಡೆಸಲಾಗಿದೆ. ಗುರುವಾರ (ಇಂದು) ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಯಿತು. ಮೊದಲ ಪಾಳಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ರ ವರೆಗೆ ಮತ್ತು 2ನೇ ಪಾಳಿ ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಸುಸೂತ್ರವಾಗಿ ನಡೆಯಿತು.
ಭದ್ರತಾ ಪರೀಶೀಲನೆ ವೇಳೆ ಮೊದಲ ಪಾಳಿಯಲ್ಲಿ 7 ಅಭ್ಯರ್ಥಿಗಳು, ಮಧ್ಯಾಹ್ನದ ಪರೀಕ್ಷೆ ವೇಳೆ 8 ಮಂದಿ ಸೇರಿ 15 ಮಂದಿ ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರೆಲ್ಲರೂ ನೋಂದಾಯಿತ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.