ಬೆಂಗಳೂರು, ಜು. 01 (DaijiworldNews/AA): ತೆರಿಗೆ ಕಟ್ಟಿ ಕಂಗಾಲಾಗಿರುವ ಜನತೆಗೆ ಈ ಸರ್ಕಾರ ಮಹಾ ದ್ರೋಹ ಮಾಡುತ್ತಿದ್ದು, ಕೇವಲ ಸಭೆ ನಡೆಸಿ ರೀಲ್ಸ್ ಮಾಡುವುದನ್ನು ಬಿಟ್ಟು ಈ ಲೂಟಿಯ ಹಿಂದಿರುವ ದೊಡ್ಡ ದೊಡ್ಡ ತಿಮಿಂಗಲಗಳು ಯಾರು ಎನ್ನುವುದನ್ನು ತನಿಖೆ ಮಾಡಿಸಿ ಪತ್ತೆ ಹಚ್ಚಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಚಿವ ಕೃಷ್ಣಭೈರೇಗೌಡ ಅವರು ಸಭೆಯಲ್ಲಿ 'ನನ್ನ ಕಿವಿಯಲ್ಲಿ ದಾಸವಾಳ ಹೂವು ಕಾಣ್ತಾ ಇದ್ಯಾ?' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್ ಅಶೋಕ್, "ನಾಯಿಗಳ ಸಂತಾನಹರಣ ಮತ್ತು ಸಸಿ ನೆಡುವ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಸ್ವತಃ ಸಚಿವರೇ ಸರ್ಕಾರದ ಲೂಟಿಯನ್ನು ಬಯಲು ಮಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಅಸಲಿಗೆ ಈ ಪ್ರಶ್ನೆಯನ್ನು ಕೇಳಬೇಕಾಗಿರುವುದು ತಾವಲ್ಲ ಸ್ವಾಮಿ, ಏಳೂವರೆ ಕೋಟಿ ಕನ್ನಡಿಗರು ನಿಮ್ಮ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿದ್ದಾರೆ. ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ, ಕೆಳಮಟ್ಟದ ಅಧಿಕಾರಿಗಳ ಮೇಲೆ ರೋಷಾವೇಶ ತೋರಿಸಿದರೆ ಏನು ಪ್ರಯೋಜನ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಮೀಟಿಂಗ್ಗಳಲ್ಲಿ ಸಣ್ಣಪುಟ್ಟ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿದರೆ ಲೂಟಿ ಹೊಡೆದ ಹಣ ವಾಪಸ್ ಬರುತ್ತಾ? ಈ ಮಹಾಲೂಟಿಯ ಹಿಂದಿರುವ ಅಸಲಿ ಮುಖಗಳನ್ನು ಬಯಲಿಗೆಳೆಯಬೇಕು" ಎಂದು ಪೋಸ್ಟ್ ಮಾಡಿದ್ದಾರೆ.
"ಬೆಂಗಳೂರಿನಲ್ಲಿ ಒಂದು ಸಸಿ ನೆಡಲು ಬರೋಬ್ಬರಿ 2,300 ರೂಪಾಯಿಯಿಂದ 3,108 ರೂಪಾಯಿವರೆಗೆ ವೆಚ್ಚ ಮಾಡಲಾಗುತ್ತಿದೆ. ಆದರೆ ರಸ್ತೆ ಬದಿಯಲ್ಲಿ ಸರಿಯಾಗಿ ಗುಣಿಯನ್ನೇ ತೆಗೆಯದೆ, ಗೊಬ್ಬರ ಹಾಕದೆ ಕೇವಲ ಕಾಗದದ ಮೇಲೆ ಗಿಡ ನೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲಾಗಿದೆ" ಎಂದು ಹೇಳಿದ್ದಾರೆ.
"ಕಳೆದ 5 ವರ್ಷಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ 42.50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೂ ಬೆಂಗಳೂರಿನಲ್ಲಿ ನಾಯಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗಾದರೆ ಬಡವರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ?" ಎಂದು ಕೇಳಿದರು.
"ಪ್ರತಿ ಹಗರಣ ನಡೆದಾಗಲೂ ಕೇವಲ ಅಧಿಕಾರಿಶಾಹಿಯನ್ನಷ್ಟೇ ಹೊಣೆ ಮಾಡಿ ಸಚಿವರು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಮೇಲೆ ನಿಗಾ ಇಡಲು ಕಾರ್ಯಾಂಗವನ್ನು ಮುನ್ನಡೆಸಲು ಮಂತ್ರಿಗಳಿರುವುದು. ಸಚಿವರ ಮೂಗಿನಡಿಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತೇ? ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲ ಎಂಬುದು ಸಚಿವರ ಮಾತಿನಿಂದಲೇ ಜಗಜ್ಜಾಹೀರಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.