ನವದೆಹಲಿ, ಜೂ. 26 (DaijiworldNews/AK): ಭಾರತದಲ್ಲಿ ಮಾದಕ ದ್ರವ್ಯಗಳ ಜಾಲವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರವು ದೊಡ್ಡ ಯೋಜನೆಯನ್ನು ಸಿದ್ಧಪಡಿಸಿದೆ.

ನವದೆಹಲಿಯಲ್ಲಿ ನಡೆದ 10ನೇ NCORD ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ 3 ವರ್ಷಗಳ ಅವಧಿಯ ‘ಮಾದಕ ದ್ರವ್ಯ ನಿಯಂತ್ರಣ ವಿಷನ್ ಡಾಕ್ಯುಮೆಂಟ್’ ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ದೇಶಾದ್ಯಂತ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 6,000 ಕೋಟಿ ರೂ. ಮೌಲ್ಯದ 2,09,500 ಕೆಜಿ ಮಾದಕ ಪದಾರ್ಥಗಳನ್ನು ಏಕಕಾಲದಲ್ಲಿ ನಾಶಪಡಿಸುವ ‘ಡ್ರಗ್ ವಿಲೇವಾರಿ ಪಾಕ್ಷಿಕ ಅಭಿಯಾನ’ಕ್ಕೆ ಚಾಲನೆ ನೀಡುವ ಮೂಲಕ ಡ್ರಗ್ಸ್ ಮಾಫಿಯಾಗೆ ಕಠಿಣ ಸಂದೇಶ ರವಾನಿಸಿದರು.
“ಮಾದಕ ದ್ರವ್ಯದ ಪಿಡುಗು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ. ಅದು ದೇಶದ ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸ್ಥಿರತೆ, ಆರ್ಥಿಕ ಹಿತಾಸಕ್ತಿ ಹಾಗೂ ಕೋಟ್ಯಂತರ ಯುವ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಿದೆ” ಎಂದು ಅಮಿತ್ ಶಾ ಆತಂಕ ವ್ಯಕ್ತಪಡಿಸಿದರು. “ಈ ಪಿಡುಗಿನ ವಿರುದ್ಧ ಜಯ ಸಾಧಿಸಲು ಆಧ್ಯಾತ್ಮಿಕ ನಾಯಕರು, ಯುವಕರು, ಶಿಕ್ಷಕರು ಮತ್ತು ತಾಯಂದಿರು ಒಂದೇ ವೇದಿಕೆಗೆ ಬಂದು ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಅವರು ಕರೆ ನೀಡಿದರು.
ಹಿಂದಿನ ಸರ್ಕಾರಗಳ ಅವಧಿಗೆ ಹೋಲಿಸಿದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅಂಕಿ-ಅಂಶಗಳನ್ನು ನೀಡಿದರು. 2004ರಿಂದ 2014ರ ನಡುವೆ ದೇಶದಲ್ಲಿ ಕೇವಲ 26 ಲಕ್ಷ ಕೆಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಆದರೆ 2014ರಿಂದ 2026ರ ಅವಧಿಯಲ್ಲಿ ಈ ಪ್ರಮಾಣವು ಬರೋಬ್ಬರಿ 1.18 ಕೋಟಿ ಕೆಜಿಗೆ (11.8 ಮಿಲಿಯನ್ ಕೆಜಿ) ಏರಿಕೆಯಾಗಿದೆ. ಇದು ಸರ್ಕಾರದ ನಿರಂತರ ಕಾರ್ಯಾಚರಣೆಯ ಯಶಸ್ಸನ್ನು ತೋರಿಸುತ್ತದೆ ಎಂದರು
ಪ್ರಧಾನಿ ನರೇಂದ್ರ ಮೋದಿ ಅವರ ‘ಮಾದಕ ಮುಕ್ತ ಭಾರತ’ದ ಸಂಕಲ್ಪವನ್ನು 2047ರ ವೇಳೆಗೆ ಸಾಕಾರಗೊಳಿಸಲು ಈ 3 ವರ್ಷಗಳ ವಿಷನ್ ಡಾಕ್ಯುಮೆಂಟ್ ಅತ್ಯಂತ ಪ್ರಮುಖ ತಳಹದಿಯಾಗಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.