ಬೆಂಗಳೂರು, ಜೂ. 26 (DaijiworldNews/AK): ವನ್ಯಜೀವಿ ಪ್ರಿಯರಿಗೆ ಗುಡ್ನ್ಯೂಸ್ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ.

ತಜ್ಞರು, ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯ ಆಧರಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ನಿರ್ಧಾರಿಂದ ಸ್ಥಳೀಯ ಉದ್ಯೋಗ, ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ರಚನೆ ಮಾಡಲಾಗಿದ್ದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಈ ಸಂಬಂಧ ಜನವರಿ 2ರಂದು ಸಿಎಂ ನೇತೃತ್ವದ ಸಭೆ ನಡೆಸಿ ಚರ್ಚೆ ಮಾಡಲಾಗಿತ್ತು. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವ ಕಾರಣ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಅಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದರು.
ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ಮಾತ್ರ ಅವಕಾಶ ನೀಡುವ ಜೊತೆಗೆ, ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿತ್ತಾದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿತ್ತು. ಆದರೀಗ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಮೊದಲಿನಂತೆ ಪೂರ್ಣ ಪ್ರಮಾಣದ ಸಫಾರಿಗೆ ಅವಕಾಶ ನೀಡಿರೋದು ವನ್ಯಜೀವಿ ಪ್ರಿಯರಿಗೆ ಸಂತಸ ನೀಡಲಿದೆ.