ಧಾರವಾಡ, ಜೂ. 26 (DaijiworldNews/TA): ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮ ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಮತ್ತೊಮ್ಮೆ ಗಮನ ಸೆಳೆದಿದೆ. ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಈ ವರ್ಷವೂ ಮೊಹರಂ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಸಂಭ್ರಮದಿಂದ ಆಚರಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಮೊಹರಂ ಅಂಗವಾಗಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಪ್ರದಾಯಬದ್ಧ ಆಚರಣೆಗಳು ನಡೆದವು. ಸಾವಿರಾರು ಭಕ್ತರು ಜಾತಿ, ಧರ್ಮದ ಭೇದವಿಲ್ಲದೆ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು. ಮೊಹರಂ ಅಂಗವಾಗಿ ಅಲಾಯಿ ದೇವರನ್ನು ಡೋಲಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಡೋಲು, ತಾಸಾ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದದ ನಡುವೆ ನಡೆದ ಮೆರವಣಿಗೆಗೆ ಭಕ್ತರು ಭಕ್ತಿ ಹಾಗೂ ಉತ್ಸಾಹದಿಂದ ಸಾಕ್ಷಿಯಾದರು.
ಗ್ರಾಮದಲ್ಲಿ ಹಲವು ತಲೆಮಾರುಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಪರಸ್ಪರ ಸಹಕಾರದೊಂದಿಗೆ ಈ ಹಬ್ಬವನ್ನು ಆಚರಿಸುತ್ತಿದ್ದು, ರಾಮನಾಳ ಗ್ರಾಮ ಧಾರ್ಮಿಕ ಸೌಹಾರ್ದ ಮತ್ತು ಸಾಮಾಜಿಕ ಏಕತೆಯ ಮಾದರಿಯಾಗಿ ಗುರುತಿಸಿಕೊಂಡಿದೆ. ಈ ವರ್ಷದ ಮೊಹರಂ ಆಚರಣೆಯಲ್ಲೂ ಎರಡೂ ಸಮುದಾಯದ ಜನರು ಕೈಜೋಡಿಸಿ ಹಬ್ಬವನ್ನು ಯಶಸ್ವಿಗೊಳಿಸಿದ್ದು, ಪರಸ್ಪರ ಗೌರವ, ಸಹಬಾಳ್ವೆ ಮತ್ತು ಭಾವೈಕ್ಯತೆಯ ಸಂದೇಶವನ್ನು ಮತ್ತೊಮ್ಮೆ ಸಮಾಜಕ್ಕೆ ಸಾರಿದ್ದಾರೆ.