ನವದೆಹಲಿ, ಜೂ. 26 (DaijiworldNews/AA): ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು(ಎನ್ಸಿಇಆರ್ಟಿ) ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಬಿಡುಗಡೆ ಮಾಡಿರುವ ಪಠ್ಯಪುಸ್ತಕದಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯನ್ನು ಮೊದಲ ಬಾರಿಗೆ ಸೇರ್ಪಡೆಗೊಳಿಸಿದೆ.

9ನೇ ತರಗತಿಯ ಹೊಸ ಸಾಮಾಜಿಕ ವಿಜ್ಞಾನ ಅಂಡರ್ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್ ಹೆಸರಿನ ಈ ಹೊಸ ಪುಸ್ತಕದಲ್ಲಿ, ಭಾರತೀಯ ಪ್ರಜಾಪ್ರಭುತ್ವ ಎದುರಿಸಿದ ತುರ್ತು ಪರಿಸ್ಥಿತಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಪಠ್ಯವನ್ನು ಸೇರ್ಪಡೆಗೊಳಿಸಲಾಗಿದೆ.
ಚುನಾವಣೆಗಳು ಎಂಬ ಅಧ್ಯಾಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣಾ ಆಯೋಗವು ಈ ಪ್ರಕ್ರಿಯೆಯ ಮೂಲಕ ಯಾವೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ವ್ಯಕ್ತಿ ಪಟ್ಟಿಯಲ್ಲಿ ಸೇರದಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ 18 ವರ್ಷ ತುಂಬಿದ, ಜಾಗೃತಿಯ ಕೊರತೆಯಿಂದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸದ ಯುವ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸಲು ಈ ವ್ಯವಸ್ಥೆ ಸಹಕಾರಿಯಾಗಿದೆ ಎಂದು ವಿವರಿಸಲಾಗಿದೆ.
ಮರಣ ಹೊಂದಿದವರು, ವಾಸಸ್ಥಳ ಬದಲಾಯಿಸಿದವರು, ನಕಲಿ ಹೆಸರುಗಳು ಹಾಗೂ ಪತ್ತೆಯಾಗದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿ, ನಂತರವೇ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ
ಭಾರತದಲ್ಲಿ ಮಹಿಳೆಯರಿಗೆ ಮೊದಲಿನಿಂದಲೇ ಸಮಾನ ಮತದಾನದ ಹಕ್ಕು ನೀಡಲಾಗಿರುವುದನ್ನು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಹಾಗೂ ಗುಜರಾತ್-ಮಹಾರಾಷ್ಟ್ರದ ಮಹಿಳಾ ಸ್ನೇಹಿ ಪಂಚಾಯತ್ಗಳ ಉದಾಹರಣೆಗಳು. ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು), ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್ಗಳು, ಮಾದರಿ ನೀತಿ ಸಂಹಿತೆ ಮತ್ತು ಮತದಾರರ ಜಾಗೃತಿ ಅಭಿಯಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ.