ಇಡುಕ್ಕಿ, ಜೂ. 26 (DaijiworldNews/TA): ಕೇರಳ ಪೊಲೀಸರ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಾಚರಣೆ 'ಆಪರೇಷನ್ ತೂಫಾನ್' ಅಡಿಯಲ್ಲಿ ಮೊದಲ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದ್ದು, ಇಡುಕ್ಕಿ ಜಿಲ್ಲೆಯ ಪೂಪ್ಪರ ಪ್ರದೇಶದಲ್ಲಿದ್ದ ರಸ್ತೆ ಬದಿಯ ಅಂಗಡಿಯನ್ನು ಶುಕ್ರವಾರ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಅಂಗಡಿಯಲ್ಲಿ ನಿಷೇಧಿತ ಮಾದಕ ವಸ್ತುಗಳು ಮತ್ತು ಇತರ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕಾನೂನುಬದ್ಧ ಅನುಮತಿ ಪಡೆದ ಬಳಿಕ ಸ್ಥಳೀಯ ಪಂಚಾಯತ್ ಸಹಕಾರದೊಂದಿಗೆ ಜೆಸಿಬಿ ಯಂತ್ರ ಬಳಸಿ ಕಟ್ಟಡವನ್ನು ಕೆಡವಲಾಗಿದೆ. ತನಿಖೆ ಪ್ರಕಾರ, ಮುಡುಕುಡಿ ಹೌಸ್ ನಿವಾಸಿ 47 ವರ್ಷದ ಈಶ್ವರನ್ ಅಂಗಡಿಯನ್ನು ನಡೆಸುತ್ತಿದ್ದು, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದ ಎನ್ನಲಾಗಿದೆ. ಅಲ್ಲದೆ, ಹೆಚ್ಚಿನ ಲಾಭಕ್ಕಾಗಿ ಅಂಗಡಿಯಿಂದ ನಿಷೇಧಿತ ಮಾದಕವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಪೊಲೀಸರು ತಿಳಿಸಿರುವಂತೆ, ಈಶ್ವರನ್ ವಿರುದ್ಧ ಈಗಾಗಲೇ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಕಾನೂನು ಕ್ರಮ ಕೈಗೊಂಡಿದ್ದರೂ ಅವರು ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ಈ ಹಿಂದೆ ಅತಿಕ್ರಮಣ ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ಈಶ್ವರನ್ ಹೈಕೋರ್ಟ್ ಮೊರೆ ಹೋಗಿ ಮಧ್ಯಂತರ ತಡೆಯಾಜ್ಞೆ ಪಡೆದಿದ್ದರು. ಬಳಿಕ ನ್ಯಾಯಾಲಯವು ಅಧಿಕಾರಿಗಳ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಅಂಗಡಿಯನ್ನು ಧ್ವಂಸಗೊಳಿಸಲಾಗಿದೆ.
ಪೊಲೀಸರ ಹೇಳಿಕೆಯಂತೆ, 'ಆಪರೇಷನ್ ತೂಫಾನ್' ಅಡಿಯಲ್ಲಿ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಮಾದಕವಸ್ತು ಸಾಗಣೆ ಅಥವಾ ಮಾರಾಟಕ್ಕೆ ಬಳಸಲಾಗುತ್ತಿರುವ ಅಕ್ರಮ ಕಟ್ಟಡಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ವ್ಯಾಪಾರ ಪರವಾನಗಿಗಳನ್ನು ರದ್ದುಪಡಿಸುವುದರ ಜೊತೆಗೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ನಡೆಯುತ್ತಿರುವ 'ಆಪರೇಷನ್ ತೂಫಾನ್' ಕಾರ್ಯಾಚರಣೆಯ ಮೊದಲ ಮೂರು ವಾರಗಳಲ್ಲೇ 3,931 ಮಂದಿಯನ್ನು ಬಂಧಿಸಲಾಗಿದ್ದು, 3,657 ಮಾದಕವಸ್ತು ಸಂಬಂಧಿತ ಪ್ರಕರಣಗಳು ದಾಖಲಾಗಿವೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.