ಚಿಕ್ಕಮಗಳೂರು, ಜೂ. 26 (DaijiworldNews/AA): ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂ.ಗೂ ಅಧಿಕ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ. ಈ ಪ್ರಕರಣವನ್ನ ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಯಾವುದೇ ರೀತಿಯ ತನಿಖೆಯಿಂದಲೂ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಏಕೆಂದರೆ, ನಕಲಿ ಖಾತೆಗಳನ್ನು ಪತ್ತೆಹಚ್ಚಿದ್ದು ಸರ್ಕಾರವಲ್ಲ. ಬದಲಿಗೆ ಸಿಐಜಿ ಈ ವಂಚನೆಯನ್ನ ಬಯಲಿಗೆಳೆದಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರ ಹಣ ವರ್ಗಾವಣೆಯಾಗಿದೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ" ಎಂದು ಹೇಳಿದ್ದಾರೆ.
"ಈ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಏಕೆ? ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ನಕಲಿ ಖಾತೆಗಳ ಹಣದ ಪಾಲು ಆಳುವವರಿಗೂ ಸಿಕ್ಕಿದೆಯೇ ಎಂಬ ಸಂಶಯ ಮೂಡುತ್ತಿದ್ದು, ಗೃಹಲಕ್ಷ್ಮಿಯರ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ರಾಜ್ಯದ ಗೃಹಲಕ್ಷ್ಮಿಯರಿಗೆ ಮಾಡಿದ ದ್ರೋಹ" ಎಂದು ತಿಳಿಸಿದ್ದಾರೆ.