ನವದೆಹಲಿ, ಜೂ. 25 (DaijiworldNews/AA): ಪುಸ್ತಕದ ಹೆಸರಿಗೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ಕೃಷ್ಣ ಎಂಬುದು ಕೃಷ್ಣಾ ನದಿಯ ಹೆಸರಾಗಿದೆ ಎಂದು 6ನೇ ತರಗತಿಯ ಕನ್ನಡ ಪಠ್ಯಪುಸ್ತಕ 'ಕೃಷ್ಣ' ಕುರಿತು ಎದ್ದಿರುವ ವಿವಾದಕ್ಕೆ ಎನ್ಸಿಇಆರ್ಟಿ(ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಸ್ಪಷ್ಟನೆ ನೀಡಿದೆ.

6ನೇ ತರಗತಿಯ ಕನ್ನಡ (ಆರ್-3) ಪಠ್ಯಪುಸ್ತಕ 'ಕೃಷ್ಣ' ಕುರಿತ ಆರೋಪಗಳಿಗೆ ಪ್ರತಿಕ್ರಿಯಿಸಿದ ಎನ್ಸಿಇಆರ್ಟಿ, ಎಲ್ಲ ಆರ್-3 ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ನದಿಗಳ ಹೆಸರನ್ನೇ ಇಡಲಾಗಿದೆ. ಹಿಂದಿ ಪಠ್ಯಪುಸ್ತಕಕ್ಕೆ 'ಗಂಗಾ', ಇಂಗ್ಲಿಷ್ ಪಠ್ಯಪುಸ್ತಕಕ್ಕೆ 'ಕಾವೇರಿ' ಹಾಗೂ ಉರ್ದು ಪಠ್ಯಪುಸ್ತಕಕ್ಕೆ 'ಜಮುನಾ' ಎಂದು ಹೆಸರು ಇಡಲಾಗಿದೆ. ಅದೇ ಮಾದರಿಯಲ್ಲಿ ಕನ್ನಡ ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಡಲಾಗಿದೆ ಎಂದು ತಿಳಿಸಿದೆ.
ಕೃಷ್ಣಾ ನದಿ ಕರ್ನಾಟಕದ ಸಂಸ್ಕೃತಿ, ಭೌಗೋಳಿಕತೆ ಹಾಗೂ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಈ ಹೆಸರನ್ನು ಆಯ್ಕೆ ಮಾಡಲಾಗಿದೆ. 6ನೇ ಅಧ್ಯಾಯವಾದ ಆರೋಗ್ಯವೇ ಸಂಪತ್ತು ಪಾಠದಲ್ಲಿ ಸಮತೋಲಿತ ಆಹಾರದ ಬಗ್ಗೆ ವಿವರಿಸಲಾಗಿದೆ. ಹಾಲು, ಹಸಿರು ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗಿದೆ ಎಂದು ಎನ್ಸಿಇಆರ್ಟಿ ಸ್ಪಷ್ಟಪಡಿಸಿದೆ.
ಪಾಠದಲ್ಲಿರುವ ಚಿತ್ರಗಳಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ರೀತಿಯ ಆಹಾರ ಪದಾರ್ಥಗಳನ್ನು ತೋರಿಸಲಾಗಿದೆ. ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಉಲ್ಲೇಖವೂ ಪಾಠದಲ್ಲಿದೆ. ಸಮತೋಲಿತ ಆಹಾರ ಎಂದರೇನು? ಎಂಬ ಪ್ರಶ್ನೆಯ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದೆ.
ಪುಸ್ತಕದಲ್ಲಿ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಿಲ್ಲ. ಹಾಗೆಯೇ ಮಾಂಸಾಹಾರವನ್ನು ವಿರೋಧಿಸಿಲ್ಲ. ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಪಾಠದ ಉದ್ದೇಶ. ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2023ರ ಮಾರ್ಗಸೂಚಿಗಳ ಅನ್ವಯ ಗುಣಮಟ್ಟದ ಹಾಗೂ ಎಲ್ಲರನ್ನು ಒಳಗೊಂಡ ಪಠ್ಯಪುಸ್ತಕಗಳನ್ನು ರೂಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.